ಮನೆ ಅಪರಾಧ ಕೀನ್ಯಾ: 42 ಮಹಿಳೆಯರನ್ನು ಭೀಕರವಾಗಿ ಕೊಂದಿದ್ದ ನೈರೋಬಿ ಸರಣಿ ಹಂತಕ ಜೈಲಿನಿಂದ ಪರಾರಿ

ಕೀನ್ಯಾ: 42 ಮಹಿಳೆಯರನ್ನು ಭೀಕರವಾಗಿ ಕೊಂದಿದ್ದ ನೈರೋಬಿ ಸರಣಿ ಹಂತಕ ಜೈಲಿನಿಂದ ಪರಾರಿ

0

ಲಂಡನ್:  ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ (ಸೀರಿಯಲ್ ಕಿಲ್ಲರ್) ಜೈಲಿನಿಂದ ಪರಾರಿಯಾಗಿದ್ದಾನೆ.

Join Our Whatsapp Group

ಆಗಸ್ಟ್ 19ರಂದು ನೈರೋಬಿ ಜೈಲಿನಿಂದ ಸರಣಿ ಹಂತಕ 33 ವರ್ಷದ ಕಾಲಿನ್ಸ್ ಜುಮೈಸಿ ಖಲುಶಾ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಕೀನ್ಯಾ ನ್ಯಾಷನಲ್ ಪೊಲೀಸ್ ಸರ್ವಿಸ್ ತಿಳಿಸಿದೆ.

ಖಲುಶಾ ತನ್ನ ಹೆಂಡತಿಯೂ ಸೇರಿದಂತೆ 42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾನೆ.

ನೈರೋಬಿಯ ಕ್ವಾರಿಯೊಂದರಲ್ಲಿ ಕತ್ತರಿಸಿದ ಮಹಿಳೆಯರ 9 ಶವಗಳು ಪತ್ತೆಯಾಗಿದ್ದವು. ಕೂಡಲೇ ಎಚ್ಚೆತ್ತುಕೊಂಡು ಭಾರಿ ಕಾರ್ಯಾಚರಣೆ ಮಾಡಿದ ಕೀನ್ಯಾ ಪೊಲೀಸರು ಜುಲೈ 16 ರಂದು ಕಾಲಿನ್ಸ್ ಜುಮೈಸಿ ಖಲುಶಾನನ್ನು ಬಂಧಿಸಿದ್ದರು. ಆದರೆ, ವಿಚಾರಣೆ ನಡೆಯುವ ಹಂತದಲ್ಲೇ ಆತ ತಪ್ಪಿಸಿಕೊಂಡಿದ್ದು ನೈರೋಬಿ ಮಹಿಳೆಯರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ತನ್ನ ಹೆಂಡತಿಯೂ ಸೇರಿದಂತೆ 42 ಮಹಿಳೆಯರನ್ನು ಕೊಂದಿರುವುದಾಗಿ ಖಲುಶಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚು ಭದ್ರತೆ ಇರುವ ಜೈಲಿನಿಂದ ಸರಣಿ ಹಂತಕ ಹೇಗೆ ತಪ್ಪಿಸಿಕೊಂಡ ಎಂದು ನ್ಯಾಯಾಧೀಶರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ 9 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಕಾಲಿನ್ಸ್ ಜುಮೈಸಿ ಖಲುಶಾ ಬಂಧನಕ್ಕೆ ಬಲೆ ಬೀಸಲಾಗಿದೆ. ಆತ ಪ್ರೇಮ ವೈಫಲ್ಯ ಅನುಭವಿಸಿದ್ದ. ಅದಕ್ಕಾಗಿ ಆತ ಮಹಿಳೆಯರಿಗೆ ಆಮೀಷ ತೋರಿಸಿ ಅವರನ್ನು ಕೊಲೆ ಮಾಡಿ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಕ್ವಾರಿಗೆ ಎಸೆಯುತ್ತಿದ್ದ ಎಂದು ಅಪರಾಧ ದಳದ ಡಿಐಜಿ ಮೊಹಮ್ಮದ್ ಅಮಿನ್ ತಿಳಿಸಿದ್ದಾರೆ.

ಖಲುಶಾ ಪರ ವಕೀಲ, ತನ್ನ ಕಕ್ಷಿದಾರ ತಪ್ಪು ಮಾಡಿಲ್ಲ. ಪೊಲೀಸರು ಬಲವಂತ ಮಾಡಿ ತಪ್ಪನ್ನು ಒಪ್ಪಿಸಿದ್ದಾರೆ ಎಂದು ದೂರಿದ್ದಾರೆ.

 ಈಗಾಗಲೇ ರಾಜಕೀಯ ಪ್ರಕ್ಷುಬ್ದತೆ ಅನುಭವಿಸುತ್ತಿರುವ ಪೂರ್ವ ಆಫ್ರಿಕಾದ ಕೀನ್ಯಾದಲ್ಲಿ ನಡೆದ ಮಹಿಳೆಯರ ಸರಣಿ ಕೊಲೆ ಮಹಿಳಾ ದೌರ್ಜನ್ಯವನ್ನು ಎತ್ತಿ ತೋರಿಸಿದೆ.