ಬೆಂಗಳೂರು (Bengaluru)- ನಾವು ಹಿಟ್ ಅಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ಎಂದು ಬಿಜೆಪಿಯನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾಕಲ್ಯಾಣ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್ ನವರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ ಕೇವಲ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಹಾಗಾದರೆ ನಾವು ಹಿಟ್ ಅಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ನಾವು ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡಿದಾಗ ಆರೋಪಪಟ್ಟಿ ಸಲ್ಲಿಸುತ್ತಾರೆ. ಪಿಎಸ್ಐ ಅಕ್ರಮದ ಬಗ್ಗೆ ಹೇಳಿದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತೀರಿ. ನಂತರ ನೀವೇ ತನಿಖಾ ತಂಡ ರಚನೆ ಮಾಡಿದ್ದೀರಿ. ಸುಮಾರು 50ಕ್ಕೂ ಹೆಚ್ಚು ಜನ ಅಧಿಕಾರಿಗಳು ಸೇರಿದಂತೆ ಬಂಧನವಾಗಿದ್ದಾರೆ. ಇದೆಲ್ಲವೂ ಹಿಟ್ ಅಂಡ್ ರನ್ ಹೇಗೆ ಆಗುತ್ತೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ಈ 431 ಕೋಟಿಯ ಗಂಗಾ ಕಲ್ಯಾಣ ಯೋಜನೆ ರಾಜ್ಯದ ಪರಿಶಿಷ್ಟರ ಕಲ್ಯಾಣಕ್ಕಾಗಿ ಮಾಡಲಾಗಿದ್ದು, ಈ 40 ಪರ್ಸೆಂಟ್ ಸರ್ಕಾರ ಇದರಲ್ಲೂ ಹಣ ದೋಚುತ್ತಿದೆ. ಈ ಬಗ್ಗೆ ಆರೋಪ ಮಾಡಿದಾಗ ಇದು ಹಸಿ ಸುಳ್ಳು ಎಂದರು. ಜತೆಗೆ ತನಿಖಾ ಸಮಿತಿ ರಚಿಸಿದರು.
ಸಮಾಜದ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನು ನುಂಗುತ್ತಿದ್ದಾರೆ. ಇವರು ಹಿಂದುಳಿದವರು, ಪರಿಶಿಷ್ಟರ ಹಣ ತಿನ್ನುವ ಮಟ್ಟಕ್ಕೆ ಬಂದಿದ್ದಾರೆ ಎಂದು ಭಾವಿಸುತ್ತಿದ್ದೆ. ನನ್ನ ಅನುಮಾನಕ್ಕೆ ಮುಖ್ಯಮಂತ್ರಿಗಳು ದಾವೋಸ್ ನಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ.
ಅಲ್ಲಿ ಲಕ್ಷ್ಮಿ ಮಿತ್ತಲ್ ಅವರು ನಿಮ್ಮ ಸರ್ಕಾರಕ್ಕೆ ಬಹುಮತ ಇದೆಯೇ ಎಂದು ಕೇಳಿದಾಗ ಸರಳ ಬಹುಮತ ಇದೆ ಎಂದಿದ್ದಾರೆ. ಅದು ನಿಮಗೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದಾಗ, ಇಲ್ಲ ವಿರೋಧ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದಾರೆ ಎಂದು ಹೇಳುತ್ತಾರೆ. ಆಗ ನನಗೆ ಗೊತ್ತಾಯಿತು. ಬಿಜೆಪಿಯ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಭ್ರಷ್ಟಾಚಾರ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ.
ಇವರಿಗೆ ಸಾರ್ವಜನಿಕರ ಹಣ ಲೂಟಿ ಮಾಡಿ ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ?
ಸರ್ಕಾರ ನಿರಂತರವಾಗಿ ಹಗರಣ ನಡೆದಿಲ್ಲ ಎಂದು ಹೇಳುತ್ತಿದೆ. ಮೇ 20ರಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ, ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೇ 11ರಂದು ಈ ಪ್ರಕರಣದಲ್ಲಿನ ತನಿಖಾಧಿಕಾರಿಗಳು ಮುಖ್ಯಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಾಥಮಿಕ ವರದಿ ಸಲ್ಲಿಸಿದ್ದು, ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾದರೆ ಮಂತ್ರಿಗಳಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲವೇ? ಅಥವಾ ಅರಿವಿದ್ದರೂ ಬೇಕಂತಲೇ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರಾ? ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು.
ನಿಗಮಗಳು ಎಲ್ಲ ದಾಖಲೆ ನೀಡಿಲ್ಲ. ಕೊಟ್ಟಿರುವ ಕೆಲವು ದಾಖಲೆಗಳನ್ನೇ ಆಧರಿಸಿ ಈ ತನಿಖೆ ಮಾಡಿದ್ದು, ತನಿಖಾಧಿಕಾರಿಗಳು ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸುತ್ತಾರೆ. ಈ ವರದಿ ನೀಡಿರುವುದು ಸರ್ಕಾರ ನೇಮಿಸಿರುವ ಅಧಿಕಾರಿಗಳೇ ನೀಡಿದ್ದಾರೆ. ನಿಮ್ಮ ಬಳಿ ದಾಖಲೆ ಇಲ್ಲ ಎಂದರೆ ನಿಮ್ಮ ಅಧಿಕಾರಿಗಳಿಂದ ನೋಟೀಸ್ ಕೊಡಿಸಿ, ನಾನೇ ನಿಮಗೆ ಈ ದಾಖಲೆಗಳನ್ನು ನೀಡುತ್ತೇನೆ.
ಈ ತನಿಖಾ ವರದಿಯಲ್ಲಿ ಗುತ್ತಿಗೆದಾರರ ವಾರ್ಷಿಕ ವಹಿವಾಟಿನ ಕುರಿತು ಪರಿಶೀಲನೆ ನಡೆಸಬೇಕು. ಕೆಲಸ ಮಾಡಿರುವ ಪ್ರಮಾಣ ಪತ್ರ ಪರಿಶೀಲಿಸಬೇಕು. ಇನ್ನು ಕೊಳವೆ ಬಾವಿ ಯಂತ್ರಗಳು 5 ಸ್ಟಾರ್ ಅಥವಾ 4 ಸ್ಟಾರ್ ಇರಬೇಕು. ಅದು ಕೂಡ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ.
ಸಮಾಜ ಕಲ್ಯಾಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲವೇ? ಇವರು ರಚಿಸಿದ ತನಿಖಾ ತಂಡಗಳಿಗೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಯಾಕೆ? ತನಿಖಾ ವರದಿಯಲ್ಲಿ ಯಾವ ನಿಗಮ ಎಷ್ಟು ದಾಖಲೆ ನೀಡಿದ್ದಾರೆ ಎಂದು ಉಲ್ಲಂಘಿಸಲಾಗಿದೆ ಎಂದರು.