ದಿಸ್ಪುರ್: ಅಸ್ಸಾಂನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶನಿವಾರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ತಫಾಜುಲ್ ಇಸ್ಲಾಂನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಅದರಂತೆ ಹೆಚ್ಚಿನ ತನಿಖೆಗಾಗಿ ಆತನನ್ನು ಶನಿವಾರ ಜಾವ 4 ಗಂಟೆಗೆ ಅಪರಾಧ ಎಸಗಿದ ಸ್ಥಳಕ್ಕೆ ಮಹಜರು ನಡೆಸಲು ಕರೆದೊಯ್ಯುವ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಅಲ್ಲೇ ಇದ್ದ ಕೆರೆಗೆ ಹಾರಿದ್ದಾನೆ. ಸರಿಯಾಗಿ ಈಜು ಬಾರದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮರುಳುಗಿ ಮೃತಪಟ್ಟಿದ್ದು, ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ನೀರಿನಿಂದ ಮೇಲಕ್ಕೆತ್ತಲಾಯಿತಾದರೂ ಅಷ್ಟೋತ್ತಿಗಾಗಲೇ ಆತ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಅಪರಾಧಿಗಳಲ್ಲಿ ಇಸ್ಲಾಂ ಕೂಡ ಓರ್ವನಾಗಿದ್ದು. ಗುರುವಾರ (ಆಗಸ್ಟ್ 22) ರಂದು ಸಂಜೆ ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕಿಯ ಮೇಲೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಈ ವೇಳೆ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಸ್ಥಳೀಯರು ಕಂಡು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳು ನಡೆಸಿದ್ದಾರೆ, ಈ ವೇಳೆ ಘಟನೆಗೆ ಸಂಬಂಧಿಸಿ ಹೇಳಿಕೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಇತರ ಇಬ್ಬರು ಅಪರಾಧಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.