ಮನೆ ಕಾನೂನು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಚಿವ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ವರದಿ...

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಚಿವ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ವರದಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

0

ಬೆಂಗಳೂರು: ಡಿವೈಎಸ್ ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸಚಿವರ ಮೇಲಿದ್ದ ಕಳಂಕ ಸಂಪೂರ್ಣ ನಿವಾರಣೆಯಾದಂತಾಗಿದೆ.

Join Our Whatsapp Group

ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐನ ಕ್ರಮ ಪ್ರಶ್ನಿಸಿ ಗಣಪತಿ ಸಹೋದರಿ ಸಬಿತಾ ಮತ್ತಿತರರು ಸಲ್ಲಿಸಿರುವ ವಿಶೇಷ ಕ್ರಿಮಿನಲ್ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮ ಅವರನ್ನೊಳಗೊಂಡ ಪೀಠ ಮಂಗಳವಾರ ವಜಾಗೊಳಿಸಿದೆ.

ಇದರಿಂದಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಂಟು ವರ್ಷಕ್ಕೂ ಹೆಚ್ಚು ಕಾಲ ನಡೆದ ಕಾನೂನು ಸಂಘರ್ಷದಲ್ಲಿ ಸಚಿವ ಜಾರ್ಜ್ ಅವರಿಗೆ ಗೆಲುವು ಲಭಿಸಿದ್ದು, ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ನಿರ್ಧಾವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಂತಾಗಿದೆ.

ಈ ನೆಲದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ.  ನ್ಯಾಯ ಯಾವತ್ತೂ ಸತ್ಯದ ಪರವಾಗಿರುತ್ತದೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ  ನನ್ನ ವಿರುದ್ಧ ಮಾಡಿದ್ದ ಸುಳ್ಳು ಆರೋಪಗಳಿಂದ ಮುಕ್ತಿ ಸಿಕ್ಕಿದೆ.

– ಕೆ.ಜೆ. ಜಾರ್ಜ್‌, ಇಂದನ ಸಚಿವರು

2016ರ ಜು.17ರ ಡಿವೈಎಸ್ಪಿ ಎಂ.ಕೆ.ಗಣಪತಿ ಕೊಡಗಿನ ಹೋಟೆಲ್ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಾಡಿದ್ದ ವಿಡಿಯೋದಲ್ಲಿ ಅವರು ಆಗ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ಹೆಸರು ಪ್ರಸ್ತಾಪಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವ ಾದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನುಿ ಸಿಬಿಐಗೆ ವಹಿಸಿತ್ತು.

ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸಿಬಿಐ, 2019ರಲ್ಲಿ ವರದಿ ನೀಡಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಗಣಪತಿ ಆತ್ಮಹತ್ಯೆಗೆ ಕಿರುಕುಳ ಕಾರಣವಲ್ಲ. ಬದಲಾಗಿ ಒಂದೆರಡು ಬಾರಿ ಸಚಿವ ಜಾರ್ಜ್ ಅವರು ಗಣಪತಿಗೆ ನೆರವು ನೀಡಿದ್ದರು ಎಂದು ಹೇಳಿತ್ತು.

ಗೃಹ ಸಚಿವರಾಗಿದ್ದಾಗ ಮಂಗಳೂರಿಗೆ ಬಂದಿದ್ದ ಜಾರ್ಜ್‌ ಅವರಿಗೆ ಕ್ರೈಸ್ತ ಸಂಘಟನೆಗಳು ಗಣಪತಿ ವಿರುದ್ಧ ದೂರು ನೀಡಿದ್ದವು. ಇದನ್ನೇ ಕಾರಣವಾಗಿಟ್ಟುಕೊಂಡು ಅವರು ದ್ವೇಷ ಸಾಧಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಭಾವಿಸಿದ್ದನ್ನು ಒಪ್ಪತಕ್ಕದ್ದಲ್ಲ. ಅಲ್ಲದೆ, ಪೊಲೀಸ್‌ ಅಧಿಕಾರಿ ಪ್ರಸ್ತಾಪಿಸಿದ ಪ್ರಕರಣ 2011ರಲ್ಲೇ ಮುಕ್ತಾಯಗೊಂಡಿತ್ತು. ಐದು ವರ್ಷಗಳ ಬಳಿಕ ಜಾರ್ಜ್‌ ಮೇಲೆ ಆರೋಪ ಮಾಡಿರುವುದಕ್ಕೆ ಯಾವುದೇ ಮಹತ್ವವಿಲ್ಲ ಎಂದೂ ಸಿಬಿಐ ಸ್ಪಷ್ಟಪಡಿಸಿತ್ತು. ಇದಲ್ಲದೆ, ಬೆಂಗಳೂರು ಅಪರಾಧ ವಿಭಾಗದ ಐ.ಜಿ ಪ್ರಣಬ್‌ ಮೊಹಂತಿ ಹಾಗೂ ಮಂಗಳೂರು ಐ.ಜಿ ಆಗಿದ್ದ ಎ.ಎಂ. ಪ್ರಸಾದ್‌ ಅವರ ವಿರುದ್ಧ ಗಣ‍‍ಪತಿ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದೂ ಹೇಳಿತ್ತು.

ಇದಕ್ಕೂ ಮೊದಲು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರಣೆಗೆ ನ್ಯಾ. ಕೆ.ಎನ್‌. ಕೇಶವನಾರಾಯಣ ನೇತೃತ್ವದಲ್ಲಿ ರಚಿಸಿದ್ದ ಏಕಸದಸ್ಯ ಆಯೋಗವು 2018ರ ಫೆಬ್ರವರಿ 27ರಂದು ಸರಕಾರಕ್ಕೆ ತನ್ನ ವರದಿಯನ್ನು  ಸಲ್ಲಿಸಿತ್ತು.  ಅದರಂತೆ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಐಪಿಎಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ, ಎ.ಎಂ. ಪ್ರಸಾದ್‌ಗೆ ಈ ವರದಿಯಲ್ಲಿ ಕ್ಲೀನ್‌ ಚಿಟ್‌ ನೀಡಲಾಗಿತ್ತು.

ಆದರೂ ಸಚಿವ ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಗಣಪತಿ ಸಹೋದರಿ ಸಬಿತಾ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.