ಮನೆ ಸ್ಥಳೀಯ 22 ವರ್ಷದ ಬಳಿಕ 3270 ಮಂದಿಗೆ ಆಶ್ರಯ ನಿವೇಶನ ನೀಡುವ ಸಂಕಲ್ಪ

22 ವರ್ಷದ ಬಳಿಕ 3270 ಮಂದಿಗೆ ಆಶ್ರಯ ನಿವೇಶನ ನೀಡುವ ಸಂಕಲ್ಪ

ಪಾಲಿಕೆಯ ಆಶ್ರಯ ಸಮಿತಿ ಮೊದಲ ಸಭೆಯಲ್ಲಿ ಶಾಸಕ ಕೆ. ಹರೀಶ್ ಗೌಡ ಭರವಸೆ

0

Join Our Whatsapp Group

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಕಗಳಿಂದಲೂ ಒಂದು ನಿವೇಶನ ಅಥವಾ ಗುಂಪು ಮನೆ ವಿತರಣೆ ಆಗಿಲ್ಲ. ಒಟ್ಟು 3270 ಮಂದಿ ಅರ್ಜಿದಾರರಿಗೂ ಇನ್ನು ಒಂದು ವರ್ಷದೊಳಗೆ ನಿವೇಶನ ಅಥವಾ ಗುಂಪು ಮನೆ ಹಂಚಿಕೆಗೆ ಕ್ರಮವಹಿಸುವುದಾಗಿ ಶಾಸಕ ಕೆ. ಹರೀಶ್ ಗೌಡ ಚಾಮರಾಜ ವಿಧಾನಸಭಾ ಕ್ಷೇತ್ರದ ಜನರಿಗೆ ಮೊದಲ ಸಭೆಯಲ್ಲೇ ಸಿಹಿ ಸುದ್ದಿ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೊದಲ ಆಶ್ರಯಸಮಿತಿ ಸಭೆ ನಡೆಸಿ ಅವರು ಮಾತನಾಡಿದರು. ಆಶ್ರಯ ಸಮಿತಿಯ ಮೊದಲ ಸಭೆ ಮಾಡಿದ್ದು, ಕ್ಷೇತ್ರದ ಜನರಿಗೆ ಎನೆಲ್ಲಾ ಆಗಬೇಕು, ಎನೆಲ್ಲಾ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ. ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ದರಿದ್ದೇವೆ. ಅವರು ಪ್ರಾಮಾಣಿಕತೆಯಿಂದ ಸೂರು ಒದಗಿಸಿ, ಯಾರೆಲ್ಲಾ ಅರ್ಜಿ ಹಾಕಿದ್ದಾರೆ ಅವರೆಗೆಲ್ಲಾ ಸೂರು ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

3270 ಮಂದಿ 2002ರಿಂದಲೂ ಹಣ ಕಟ್ಟಿದ್ದಾರೆ. 22 ವರ್ಷದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರಿಗೂ ಸೂರು ಅಥವಾ ನಿವೇಶನ ಕೊಟ್ಟಿಲ್ಲ. ಇದಕ್ಕಾಗಿ ಹಂಚ್ಯಾ ದಲ್ಲಿ 24.9 ಎಕರೆ, ಹೆಬ್ಬಾಳ ಗ್ರಾಮದಲ್ಲಿ 8.28, ದಟ್ಟಗಳ್ಳಿಯ ಐಯ್ಯಜ್ಜನಹುಂಡಿ 15 ಎಕರೆ ಜಾಗ ಗುರುತಿಸಲಾಗಿದೆ. ಇದರೊಟ್ಟಿಗೆ ಶ್ರೀರಾಪುಂರ ವ್ಯಾಪ್ತಿಯಲ್ಲಿ 36.24 ಎಕರೆ, ಶ್ಯಾದನಹಳ್ಳಿ 10 ಎಕರೆ ಮತ್ತು ಬಂಡಿಪಾಳ್ಯದಲ್ಲಿ 6.24 ಎಕರೆ ಜಾಗ ಹುಡುಕಾಟವೂ ಪ್ರಕ್ರಿಯೆಯಲ್ಲಿದೆ. ಈ ವರ್ಷದೊಳಗೆ ಅರ್ಜಿ ಸಲ್ಲಿಸಿರುವ ಅಷ್ಟು ಮಂದಿಗೂ ಮೊದಲ ಆದ್ಯತೆ ಮೇರೆಗೆ ನಿವೇಶನ ಅಥವಾ ಗುಂಪು ಮನೆ ನೀಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಅರ್ಜಿದಾರರು ಗಮನಿಸಿ

ಅರ್ಜಿದಾರರು ಮೈಸೂರು ಮಹಾನಗರ ಪಾಲಿಕೆಯ ಆಶ್ರಯ ಶಾಖೆಯ ಓ.ಎ. ಉಮೇಶ್ ಅವರ ಬಳಿ ತಾವು ಅರ್ಜಿ ಸಲ್ಲಿಸಿರುವ ಹಾಗೂ ಹಣ ಕಟ್ಟಿರುವ ಮಾಹಿತಿಯನ್ನು ತಂದು ನೀಡಬೇಕಾಗಿ ಇದೇ ವೇಳೆ ಮನವಿ ಮಾಡಿಕೊಂಡರು.  ಆಶ್ರಯ ಸಮಿತಿ ಅನುಷ್ಠಾನಕ್ಕೆಂದೆ ಚೆಲುವಾಂಬ ಪಾರ್ಕ್ ಪಕ್ಕದ ಪಾಲಿಕೆಯ ಕಚೇರಿಯಲ್ಲಿ ಅರ್ಜಿದಾರರು ಮಾಹಿತಿ ಪಡೆದುಕೊಳ್ಳುವಂತೆ ಕೋರಿದರು.

ಇನ್ನೂ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ನರ್ಮ್ ಮನೆಗಳು ಹಾಗೂ ನಬಾರ್ಡ್ ಯೋಜನೆಯ ಮನೆಗಳಲ್ಲಿ ಒಟ್ಟು 400 ಅಪಾರ್ಟ್ಮೆಂಟ್ ಗಳ ರಿಪೇರಿ ಕೆಲಸವು ಇದೇ ವೇಳೆ ಮಾಡಲಾಗುತ್ತಿದೆ. ಹೆಬ್ಬಾಳ್ ನಲ್ಲಿರುವ 8 ಎಕರೆ 28 ಕುಂಟೆ ಜಾಗದಲ್ಲಿ ಗುಂಪು ಮನೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಒಂದು ತಿಂಗಳಲ್ಲಿ ಈ ಎಲ್ಲಾ ಪ್ರಕ್ರಿಯೆ ಅನುಮೋದನೆಯಾಗಿ ಆರಂಭಗೊಳ್ಳಲಿವೆ ಎಂದು ಹೇಳಿದರು.

ನಾನೇನೆ ಮಾಡಿದರೂ ಹೋಗಲ್ಲ

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಕೊಟ್ಟಿರುವ ಕುರಿತ ಮಾದ್ಯಮದ ಪ್ರಶ್ನೆಗೆ ನನಗಂತೂ ಅಂತಹ ಆಫರ್ ಯಾರು ಕೊಟ್ಟಿಲ್ಲ.ಕೊಟ್ಟರೆ ಬಹಿರಂಗ ಪಡಿಸುತ್ತೇನೆ. ಬಿಜೆಪಿಯಲ್ಲಿ ನಿಜಕ್ಕೂ ಅಂತಹ ಮನಸ್ಥಿತಿಯಿದೆ. ಆಡಳಿತ ಪಕ್ಷವನ್ನು ಕಾನೂನು ಬಾಹಿರವಾಗಿ ಕೆಡವಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಬಿಜೆಪಿ ತಲೆ ಕೆಳಗೆ ಮಾಡಿಕೊಂಡರೂ ನಮ್ಮನ್ನು ಎನೂ ಮಾಡಲಾಗದು. ನಮ್ಮಸರ್ಕಾರವನ್ನು ಎನೂ ಮಾಡಲಿಕ್ಕೂ ಬಿಡುವುದಿಲ್ಲವೆಂದರು. ಮೊನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೂ ರಾಜ್ಯಪಾಲರ ನಡೆಯ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳುವಂತೆಯೂ ಮನವಿ ಮಾಡುವ ನಿರ್ಣಯ ಮಾಡಲಾಗಿದೆ. ಇನ್ನೂ ಯಾವುದೇ ಶಾಸಕರು ಅನುದಾನಕ್ಕೆ ಮನವಿ ಮಾಡಿಲ್ಲ. ಸರ್ಕಾರ ಕ್ಷೇತ್ರವಾರು ನೀಡಬೇಕಾದ ಅನುದಾನ ನೀಡಿದೆ.ಆಗಸ್ಟ್ ವೇಳೆಗೆ ಮತ್ತಷ್ಟು ಅಭಿವೃದ್ಧಿ ಹಣ ನೀಡಲಿದೆ ಎಂದರು.

ಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಾದ ಅನಂತ ನಾರಾಯಣ, ಎಸ್.ಮಂಜುನಾಥ್, ಮಹಮ್ಮದ್ ಇಬ್ರಾಹಿಂ, ರಾಣಿ ಸಿದ್ದಪ್ಪಾಜಿ, ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್, ಕಂದಾಯ ವಿಭಾಗದ ಉಪಾಯುಕ್ತ ದಾಸೇಗೌಡ, ಎಸ್ ಇ ಸಿಂಧು, ಸಹಾಯಕ ಆಯುಕ್ತ ಸತ್ಯಮೂರ್ತಿ ಸೇರಿ ವಿವಿದ ವಲಯ ಕಚೇರಿ ಅಧಿಕಾರಿಗಳಿದ್ದರು.