ಬೆಂಗಳೂರು: ಹೊಸದಾಗಿ ನಿರ್ಮಾಣವಾಗುತ್ತಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡಬೇಕೆಂದು ಕರ್ನಾಟಕ ಬಹುಜನ ಫೆಡರೇಷನ್ ವತಿಯಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಬಹುಜನ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಚ್. ಶಂಕರ್ ಮಾತನಾಡಿ, ಕರುನಾಡಿನ ಹೆಮ್ಮೆಯ ಪುತ್ರ ಜನಮೆಚ್ಚುಗೆ ಪಡೆದು ಅಪ್ಪು ಎಂದೇ ಪ್ರಖ್ಯಾತಿ ಪಡೆದಿರುವ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾಗಿರುವುದು ನಾಡಿನ ಜನತೆಗೆ ನುಂಗಲಾರದ ತುತ್ತಾಗಿದೆ. ಪುನೀತ್ ರವರ ಮರಣಾನಂತರದಲ್ಲಿ ಅವರು ದೀನ ದಲಿತರಿಗೆ ಅನಾಥರಿಗೆ ಮಾಡಿರುವ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕಂಡು ನಾಡಿನ ಜನತೆ ಮೂಕವಿಸ್ಮಿತರಾಗಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ಅಮೋಘ ಅಭಿನಯ ಮತ್ತು ನೃತ್ಯದ ಮೂಲಕ ಹಲವಾರು ಜನಮಾನಸದಲ್ಲಿ ಉಳಿಯುವ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ ಎಂದರು.
ಆದ್ದರಿಂದ ತಮ್ಮ ಸರ್ಕಾರದ ಅವಧಿಯಲ್ಲಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಹೊಸದಾಗಿ ನಿರ್ಮಾಣಗೊಂಡಿರುವ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.