ಶ್ರೀರಂಗಪಟ್ಟಣ: ಸರಕು ತುಂಬಿದ ಕ್ಯಾಂಟರ್ ವಾಹನವೊಂದು ಶಾಲಾ ಶಿಕ್ಷಕರಿದ್ದ ವಾಹನ ಹಾಗೂ ಕಾರ್‌ಗೆ ಡಿಕ್ಕಿ ಸಂಭವಿಸಿರುವ ಘಟನೆ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ.
ಪಾಂಡವಪುರದಿಂದ ಮೈಸೂರು ಕಡೆಗೆ ಅತಿ ವೇಗದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಕ್ಯಾಂಟರ್ ವಾಹನ ಚಾಲಕ ನಿಯಂತ್ರಣ ತಪ್ಪಿ ಮೊದಲಿಗೆ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.ನಂತರ ಎದುರುಗಡೆ ಬರುತ್ತಿದ್ದ ಎಸ್‌ಟಿಜಿ ಶಾಲಾ ಶಿಕ್ಷಕರಿದ್ದ ವಾಹನಕ್ಕೆ ಡಿಕ್ಕಿ ಹೊಡಿದ್ದಾನೆ.
ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ರವರ ಒಡೆತನಕ್ಕೆ ಸೇರಿದ ಎಸ್‌ಟಿಜಿ ಸಂಸ್ಥೆ ಶಾಲಾ ವಾಹನದಲ್ಲಿ ಶಿಕ್ಷಕಿಯರಾದ ಚಂದ್ರಕಲಾ,ಜ್ಯೋತಿ, ಶೀಲಾ, ಸವಿತಾ ಹಾಗೂ ಚಾಲಕರಿದ್ದರು ಎಂದು ತಿಳಿದು ಬಂದಿದೆ.ಘಟನೆಯಿಂದ ನಾಲ್ಕು ಮಂದಿ ಶಿಕ್ಷಕಿಯರ ತಲೆಗೆ ಪೆಟ್ಟಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸಣ್ಣಪುಟ್ಟ ಗಾಯಗೊಂಡಿದ್ದ ಶಿಕ್ಷಕಿಯರನ್ನ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಕೊಡಿಸಿ ನಂತರ ಮೈಸೂರಿಗೆ ಕರೆದೊಯ್ದರು.
ಅವಘಡದಿಂದ ಹಳ್ಳಕ್ಕೆ ಬೀಳಬಹುದಾದ ಶಾಲಾ ವಾಹನವನ್ನು ಚಾಲಕನ ಸಮಯಪ್ರಜ್ಞೆಯಿಂದಾಗಿ ನಿಲ್ಲಿಸಿ ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಿದ್ದಾರೆ.ಒಂದು ವೇಳೆ ವಾಹನ ಹಳ್ಳಕ್ಕೆ ಬಿದ್ದಿದಲ್ಲಿ ಸಾವು ನೋವುಗಳು ಸಂಭವಿಸುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಜನಪ್ರತಿನಿದಿಗಳು ಇತ್ತ ಗಮನ ಹರಿಸಿ ಚಿಕ್ಕದಾಗಿರುವ ಹೆದ್ದಾರಿಯನ್ನು ಅಗಲೀಕರಣ ಮಾಡುವಂತೆ ಸ್ಥಳದಲ್ಲಿ ನೆರದಿದ್ದ ಸಾರ್ವಜನಿಕರು ಆಗ್ರಹಿಸಿದರು.
ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.