ಮನೆ ಮನರಂಜನೆ “ಲಾಫಿಂಗ್‌ ಬುದ್ಧ’ ಸಿನಿಮಾ ವಿಮರ್ಶೆ

“ಲಾಫಿಂಗ್‌ ಬುದ್ಧ’ ಸಿನಿಮಾ ವಿಮರ್ಶೆ

0

ಹೊಟ್ಟೆ ಪಾಡಿಗೆ ಜನ ಏನೆಲ್ಲ ಮಾಡುತ್ತಾರೆ… ಆದರೆ, ಹೊಟ್ಟೆಯೇ ಪಾಡಾದರೆ? ಸಹಜವಾಗಿರುವ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದ ಅಂಶವೊಂದು ಚಿತ್ರವಾಗಿ ಮೂಡಿಬಂದಿದೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಎಂಬ ಧ್ಯೇಯದೊಂದಿಗೆ ಹೆಣೆದ ಕಥೆಯೇ “ಲಾಫಿಂಗ್‌ ಬುದ್ಧ’.

Join Our Whatsapp Group

ನೀರೂರು ಪೊಲೀಸ್‌ ಠಾಣೆ, ಅಲ್ಲೊಬ್ಬ ಪೇದೆ, ಹೆಸರು ಗೋವರ್ಧನ. ಮುಗ್ಧ ಮನಸ್ಸು, ಹಾಸ್ಯ ಪ್ರವೃತ್ತಿ, ಭೋಜನ ಪ್ರಿಯ .. ಇದು ಅವನ ವ್ಯಕ್ತಿತ್ವ. ಇಂತಿಪ್ಪ ಗೋವರ್ಧನನ ಬಾಳಲ್ಲಿ ಸಾಡೇ ಸಾಥಿ ಹೆಗಲೇರಿದಂತೆ ಸಮಸ್ಯೆಯೊಂದು ಎದುರಾಗುತ್ತೆ. ಅದನ್ನು ಪರಿಹರಿಸುವುದರೊಳಗೆ ಮತ್ತೂಂದು ಸಮಸ್ಯೆ. ಹೀಗೆ ಎರಡು ಸುಳಿಯಲ್ಲಿ ಸಿಲುಕಿದ ನಾಯಕ ಮುಂದೇನು ಮಾಡುತ್ತಾನೆ, ಎದುರಾಗುವ ಸನ್ನಿವೇಶ, ತಿರುವುಗಳಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದೇ ಚಿತ್ರದ ಜೀವಾಳ.

ಅಪ್ಪಟ ಕೌಟುಂಬಿಕ ಚಿತ್ರದ ಅನುಭವ ನೀಡುತ್ತಾನೆ ಲಾಫಿಂಗ್‌ ಬುದ್ಧ. ಇಲ್ಲಿ ನವೀರಾದ ಪ್ರೀತಿಯಿದೆ, ನಗುವಿನ ಕಚಗುಳಿ ಇಡುವ ಹಾಸ್ಯವಿದೆ, ಭಾವನಾತ್ಮಕ ಸನ್ನಿವೇಶವಿದೆ, ಸಸ್ಪೆನ್ಸ್‌ ಇದೆ, ಥ್ರಿಲ್ಲಿಂಗ್‌ ಅಂಶಗಳಿವೆ. ಮಾಸ್‌ಗಾಗಿ ಆ್ಯಕ್ಷನ್‌ ಸನ್ನಿವೇಶವೂ ತುಂಬಿಕೊಂಡಿದೆ. ನಮ್ಮ ನಡುವೆಯೇ ಇರುವ ವಿಷಯವನ್ನು ಗಂಭೀರವಾಗಿ ತೋರಿಸಿರುವ ನಿರ್ದೇಶಕ ಭರತ್‌ರಾಜ್‌ ಪ್ರೇಕ್ಷಕರಿಗೆ ಮನರಂಜ ನೆಯ ಪಾಕವನ್ನೇ ಉಣಬಡಿಸಿದ್ದಾರೆ.

ಪೊಲೀಸರೆಂದರೆ ಭ್ರಷ್ಟರು, ಸ್ವಾರ್ಥಿಗಳು ಎಂಬ ಭಾವ ನೆಯೇ ಹೆಚ್ಚಾಗಿ ತುಂಬಿರುವಾಗ ಅವರ ತಾಕಲಾಟ, ನೋವು, ಕುಟುಂಬ ಹಾಗೂ ಕೆಲಸ ಎರಡನ್ನೂ ನಿಭಾಯಿಸುವಲ್ಲಿ ಅವರು ಪಡುವ ಪಾಡು… ಹೀಗೆ ಅವರ ಇನ್ನೊಂದು ಮುಖವನ್ನು ಅನಾವರಣ ಗೊಳಿಸಿದ್ದಾನೆ ಲಾಫಿಂಗ್‌ ಬುದ್ಧ. ಚಿತ್ರದ ಕ್ಲೈಮ್ಯಾಕ್ಸ್‌ ಕೂಡ ಅಚ್ಚರಿ ಎನಿಸುತ್ತದೆ.

ನಟ ಪ್ರಮೋದ್‌ ಶೆಟ್ಟಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸುಂದರ್‌ರಾಜ್‌ ಹಾಗೂ ತೇಜು ಬೆಳವಾಡಿ ಪಾತ್ರ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಚಿತ್ರದ ಮಧ್ಯಂತರಕ್ಕೆ ಬರುವ ದಿಗಂತ್‌ ಮುಂದಿನ ಕಥೆಯನ್ನು ಹೊತ್ತೂಯ್ಯುತ್ತಾರೆ. “ಎಂಥಾ ಚೆಂದಾನೆ ಇವಳು’ ಹಾಡು ಗುನಗುನಿಸುತ್ತದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಆಪ್ತವೆನಿಸುವ ಸಿನಿಮಾವಿದು.