ಮನೆ ಅಪರಾಧ ಮಂಡ್ಯ: ಹಣ ಡಬಲ್ ಮಾಡಿಕೊಡುವುದಾಗಿ ಆಸೆ ತೋರಿಸಿ ಖಾಸಗಿ ಕಂಪನಿಗಳಿಂದ ಜನರಿಗೆ ಪಂಗನಾಮ.!

ಮಂಡ್ಯ: ಹಣ ಡಬಲ್ ಮಾಡಿಕೊಡುವುದಾಗಿ ಆಸೆ ತೋರಿಸಿ ಖಾಸಗಿ ಕಂಪನಿಗಳಿಂದ ಜನರಿಗೆ ಪಂಗನಾಮ.!

0

ಮಂಡ್ಯ: ಹಣವನ್ನು ಡಬಲ್ ಮಾಡಿ ಕೊಡುವುದಾಗಿ ಆಸೆ ತೋರಿಸಿ ಪಿಎಸಿಎಲ್, ಹಿಂದೂಸ್ತಾನ್, ಅಗ್ರಿಗೋಲ್ಡ್ ಸೇರಿ ಹಲವು ಕಂಪನಿಗಳಿಂದ ಜನರು ಮೋಸ ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇದೀಗ ಹಣ ಕಟ್ಟಿಸಿಕೊಂಡ ಖಾಸಗಿ ಕಂಪನಿಗಳು ಜನರಿಗೆ ಪಂಗನಾಮ ಹಾಕಿದ್ದು, ತಮ್ಮ ದುಡ್ಡನ್ನು ವಾಪಸ್ ಕೊಡಿಸುವಂತೆ ಜನರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

Join Our Whatsapp Group

ದೂರು ಕೊಟ್ಟು ಹಣ ವಾಪಸ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ನಿತ್ಯ ನೂರಾರು ಜನರಿಂದ ದೂರು ಸಲ್ಲಿಕೆ ಆಗುತ್ತಿದ್ದು, ಹಣ ಕಳೆದುಕೊಂಡವರ ಸಂಖ್ಯೆ ನೋಡಿ ಜಿಲ್ಲಾಡಳಿತವೇ ದಂಗಾಗಿದೆ.

ಏಜೆಂಟ್ ಗಳಿಗೆ ಕಮಿಷನ್ ಆಸೆ ತೋರಿಸಿ ಬಡ ಜನರಿಂದ ಕಂಪನಿಗಳು ಹಣ ಕಟ್ಟಿಸಿ ಕೊಂಡಿದ್ದು, 20 ಸಾವಿರದಿಂದ 1 ಲಕ್ಷಕ್ಕೂ ಅಧಿಕ ಹಣವನ್ನು ಜನರು ಕಟ್ಟಿದ್ದಾರೆ. ಬಾಂಡ್ ಅವಧಿ ಮುಗಿದರು ಜನರಿಗೆ ಕಟ್ಟಿದ ಹಣ ಸಿಗದಂತಾಗಿದೆ. ಮತ್ತೊಂದೆಡೆ ನಿತ್ಯ 50,100 ರೂಪಾಯಿಯಂತೆ ನಾಲ್ಕೈದು ವರ್ಷ ಜನರಿಂದ ಹಣ ಸಂಗ್ರಹಿಸಿರುವ ಆರೋಪವು ಕೇಳಿ ಬಂದಿದೆ. ಜನರು ಇದೀಗ ಕಂಗಾಲಾಗಿದ್ದು ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಜಿಲ್ಲಾಡಳಿತಕ್ಕೆ ದೂರು ನೀಡುವ ಮೂಲಕ ದುಂಬಾಲು ಬಿದ್ದಿದ್ದಾರೆ.

ಅಷ್ಟೇ ಅಲ್ಲದೆ ಮಂಡ್ಯದಲ್ಲಿದ್ದ ಕಂಪನಿಯ ಕಚೇರಿಯು ಮಂಗಮಾಯವಾಗಿದ್ದು, ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಏಜೆಂಟರುಗಳಿಗೆ ದುಂಬಾಲು ಬಿದ್ದಿದ್ದಾರೆ. ಇತ್ತ ಡಿಸಿ ಕಚೇರಿಗೆ ದೂರು ಕೊಟ್ಟರೆ ಹಣ ಕೊಡಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆದ್ದರಿಂದ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ದೂರು ಸಲ್ಲಿಸುತ್ತಿದ್ದಾರೆ. ಸಾವಿರಾರು ಜನರಿಂದ ಅಂದಾಜು 100 ಕೋಟಿಗೂ ಅಧಿಕ ಹಣಕಟ್ಟಿಸಿಕೊಂಡು ಕಂಪನಿಗಳು ವಂಚನೆ ಮಾಡಿದೆ.  

ಈ ವಿಚಾರವಾಗಿ ಮಂಡ್ಯದಲ್ಲಿ ಡಿಸಿ ಡಾ. ಕುಮಾರ್ ಮಾತನಾಡಿ, BUDS ಹಾಗೂ KPID ಕಾಯ್ದೆ ಅಡಿ ವಿವಿಧ ಕಂಪನಿಗಳಿಂದ ಸಾರ್ವಜನಿಕರ ದುಡ್ಡು ತೆಗೆದು ಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿದೆ. ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು ಅರ್ಜಿ ಸಲ್ಲಿಸುವುದರಲ್ಲಿ ಕೆಲವು ಸಂಘ-ಸಂಸ್ಥೆಗಳು ಭಾಗಿಯಾಗಿ ಅರ್ಜಿದಾರರಿಂದ ದುಡ್ಡು ಕೊಡಿಸುವ ಆಮಿಷ ಒಡ್ಡಿ ವಂಚನೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಸಕ್ಷಮ ಪ್ರಾಧಿಕಾರ ಹಾಗೂ ವಿಶೇಷಾಧಿಕಾರಿಗಳು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಅರ್ಜಿ ಸ್ವೀಕರಿಸಲು ಸಕ್ಷಮ ಪ್ರಾಧಿಕಾರ ನೇಮಕವಾಗಬೇಕು. ಅರ್ಜಿ ಸ್ವೀಕರಿಸಲು ಸಕ್ಷಮ ಪ್ರಾಧಿಕಾರ ಅಧಿಕೃತವಾಗಿ ಸೂಚನೆ ಹೊರಡಿಸಬೇಕು.BUDS ಹಾಗೂ KPID ಕಾಯ್ದೆ ಅಡಿ ಕೋರ್ಟ್ ಗೆ ಹೋದರೆ ಕಾನೂನಾತ್ಮಕ ತೊಡಕು ಬರುತ್ತೆ ಎಂದು ಸಕ್ಷಮ ಪ್ರಾಧಿಕಾರ ನಮಗೆ ಸೂತ್ತೋಲೆ ಕೊಟ್ಟಿದ್ದಾರೆ. ಕೋರ್ಟಿಗೆ ಹೋದರೆ ಕಷ್ಟವಾಗುತ್ತದೆ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು ತಾತ್ಕಾಲಿಕವಾಗಿ ಅರ್ಜಿ ಸ್ವೀಕಾರ ಸ್ಥಗಿತಗೊಂಡಿದೆ ಎಂದು ಹೇಳಿದರು.

ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ನೇಮಕ ಮಾಡುವವರೆಗೆ, ಅಧಿಕೃತವಾಗಿ ಅರ್ಜಿ ಆಹ್ವಾನಿಸುವವರೆಗೆ ಅರ್ಜಿ ಸ್ವೀಕಾರ ಸ್ಥಗಿತಗೊಂಡಿದ್ದು ಸಾರ್ವಜನಿಕರು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಎಂದು ಹೇಳಿದ್ದಾರೆ.

ಕಾನೂನು ಪ್ರಕಾರ ಸಕ್ಷಮ ಪ್ರಾಧಿಕಾರ ನೇಮಕವಾದ ಬಳಿಕ ಅರ್ಜಿ ಸ್ವೀಕಾರ ಮಾಡಲಾಗುವುದು ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.