ಮನೆ ರಾಜಕೀಯ ಕರ್ನಾಟಕ ಸಿಎಂ ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಿಸಲು 54 ಲಕ್ಷ ರೂ. ಖರ್ಚು: ಆರ್‌ ಟಿಐ...

ಕರ್ನಾಟಕ ಸಿಎಂ ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಿಸಲು 54 ಲಕ್ಷ ರೂ. ಖರ್ಚು: ಆರ್‌ ಟಿಐ ಮಾಹಿತಿಯಿಂದ ಬಹಿರಂಗ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಆರೋಪದ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಕಚೇರಿಯು ತಮ್ಮ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಅಂದಾಜು 54 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಅಂಶ ಆರ್‌ ಟಿಐ ಮಾಹಿತಿಯಿಂದ ಬಹಿರಂಗಗೊಂಡಿದೆ.‌

Join Our Whatsapp Group

ಸಾಮಾಜಿಕ ಕಾರ್ಯಕರ್ತ ಮಾರಲಿಂಗ ಗೌಡ ಮಾಲಿ ಪಾಟೀಲ್‌ ಅವರು ಕೇಳಿದ ಮಾಹಿತಿಗೆ ಸಿಎಂ ಸಿದ್ದರಾಮಯ್ಯ ಕಚೇರಿಯು ನೀಡಿದ ಮಾಹಿತಿಯಲ್ಲಿ ಈ ಖರ್ಚು-ವೆಚ್ಚದ ವಿವರ ಬಯಲಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ 25ರಿಂದ 2024ರ ಮಾರ್ಚ್‌ ವರೆಗೆ ಸಿಎಂಒ(CMO) ಕಚೇರಿಯು ಅಂದಾಜು 3 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ಆರ್‌ ಟಿಐಗೆ ಉತ್ತರ ನೀಡಿದೆ. ಶೇ.18ರಷ್ಟು ಜಿಎಸ್‌ ಟಿ ಸೇರಿ ತಿಂಗಳಿಗೆ ಸರಿಸುಮಾರು 53.9 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಣೆಗೆ ಇಷ್ಟೊಂದು ಮೊತ್ತ ಖರ್ಚು ಮಾಡಬೇಕಾದ ಅಗತ್ಯ ಇದೆಯೇ ಎಂಬುದು ಸಾಮಾಜಿಕ ಕಾರ್ಯಕರ್ತ ಪಾಟೀಲ್‌ ಪ್ರಶ್ನಿಸಿರುವುದಾಗಿ ವರದಿ ವಿವರಿಸಿದೆ.

ಖರ್ಚಿನ ಬಗ್ಗೆ ಸಿಎಂ ಕಚೇರಿ ಸ್ಪಷ್ಟನೆ:

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಣೆಗೆ ವ್ಯಯಿಸುತ್ತಿರುವ ವೆಚ್ಚದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ (CMO) ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಹಿಂದಿನ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣಗಳ ಖಾತೆ ನಿರ್ವಹಣೆಗಾಗಿ ಪ್ರತಿ ತಿಂಗಳು 2 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಅದಕ್ಕೆ ಹೋಲಿಸಿದಲ್ಲಿ ನಮ್ಮದು ಕಡಿಮೆ ಖರ್ಚು ಎಂದು ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದೆ.

ಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ And ಎಡ್ವರ್ಟೈಸಿಂಗ್‌ ಲಿಮಿಟೆಡ್‌ (MCA) ಸರ್ಕಾರಿ ಸ್ವಾಮಿತ್ವದ ಸಂಸ್ಥೆ, ಸಿದ್ದರಾಮಯ್ಯ ಅವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಹೊಣೆ ಹೊತ್ತಿದ್ದು, ಅಂದಾಜು 35 ಜನರ ತಂಡ ಇದರಲ್ಲಿದೆ ಎಂದು ವರದಿ ವಿವರಿಸಿದೆ.