ಮನೆ ರಾಜ್ಯ ಗ್ರಂಥಿಗೆ ಅಂಗಡಿ, ಗೋದಾಮಿನಲ್ಲಿ ಅಗ್ನಿ ಅವಘಡ: ಪಟಾಕಿ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿ

ಗ್ರಂಥಿಗೆ ಅಂಗಡಿ, ಗೋದಾಮಿನಲ್ಲಿ ಅಗ್ನಿ ಅವಘಡ: ಪಟಾಕಿ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿ

0

ತುಮಕೂರು ಗ್ರಂಥಿಗೆ ಅಂಗಡಿ ಮತ್ತು ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿ ಮತ್ತು ಗೋದಾಮಿನಲ್ಲಿದ್ದ ಪಟಾಕಿಗಳು ಸೇರಿದಂತೆ ಇನ್ನಿತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮಂಡಿಪೇಟೆಯ ನೇತಾಜಿ ಟ್ರೇಡರ್ಟ್ ನಲ್ಲಿಂದು ನಡೆದಿದೆ.

Join Our Whatsapp Group

ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವ ಮಂಡಿಪೇಟೆಯಲ್ಲಿ ಮೆಟ್ರೋ ಮುಂಭಾಗ ಇರುವ ನೇತಾಜಿ ಟ್ರೇಡರ್ಸ್ ನಲ್ಲಿ ಇಂದು ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕೂ್ಯಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ಅಂಗಡಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಗೋಡೌನ್ ಸಹ ಇದೆ. ಹಾಗಾಗಿ ಹೊತ್ತಿಕೊಂಡಿರುವ ಬೆಂಕಿ ಗೋಡೌನ್ ಹಾಗೂ ಅಕ್ಕಪಕ್ಕದ ಅಂಗಡಿ ಮಳಿಗೆಗಳಿಗೂ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ.

ಈ ಅಂಗಡಿಯಲ್ಲಿ ಕೊಂಚ ಪ್ರಮಾಣದಲ್ಲಿ ಪಟಾಕಿ, ಗ್ರಂಥಿಗೆ, ಬಂಟಿಂಗ್ಸ್, ಧ್ವಜಗಳು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಮಾರಾಟ ಮಾಡಲು ದಾಸ್ತಾನಿಡಲಾಗಿತ್ತು. ಇಂದು ಮುಂಜಾನೆ ಬೆಂಕಿ ಹೊತ್ತಿ ಉರಿಯುತ್ತಿರುವುದರಿಂದ ಪಟಾಕಿಗಳು ನಿರಂತರವಾಗಿ ಸ್ಫೋಟಗೊಳ್ಳುತ್ತಲೇ ಇದ್ದು, ಅಕ್ಕ ಪಕ್ಕದ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಪಟಾಗಿ ಅಂಗಡಿ ಧಗಧಗನೆ ಹೊತ್ತಿ ಉರಿಯುತ್ತಿರುವುದರಿಂದ ಮಂಡಿಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು.

ಮುಂಜಾನೆಯಿಂದಲೇ ಬೆಂಕಿ ಹೊತ್ತಿ ಉರಿಯುತ್ತಿರುವ ಬಗ್ಗೆ ಸುದ್ದಿ ತಿಳಿದ ಅಂಗಡಿ ಮಾಲೀಕ ಮೋಹನ್‌ಕುಮಾರ್ ಅವರು ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಯನ್ನು ಆವರಿಸಿತ್ತು.

ಘಟನೆಯ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮದ ದಳದ ಸಿಬ್ಬಂದಿ ಮುಂಜಾನೆ ೫.೩೦ಕ್ಕೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೂ ಬೆಳಿಗ್ಗೆ ೧೧ ಗಂಟೆಯಾದರೂ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಹರಸಾಹಸಪಟ್ಟರು.

ಪಟಾಕಿ ಅಂಗಡಿಯಲ್ಲಿ ಮುಂಜಾನೆ ಬೆಂಕಿ ಹೊತ್ತಿಕೊಂಡಿರುವುದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಬೆಲೆಯ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಈ ಬೆಂಕಿ ಅವಘಡದಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಡಿಪೇಟೆಯ ಎರಡು ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಘಟನೆಯ ಸುದ್ದಿ ತಿಳಿದ ಕೂಡಲೇ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ನಗರಠಾಣೆ ಇನ್ಸ್ಪೆಕ್ಟರ್ ದಿನೇಶ್‌ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಡವೀಶ್ ನೇತೃತ್ವದಲ್ಲಿ 5 ವಾಹನಗಳಲ್ಲಿ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿದರು.