ಮನೆ ಸ್ಥಳೀಯ ಸಂಭ್ರಮದಿಂದ ಪ್ರವಾಸೋದ್ಯಮ ದಿನ ಆಚರಿಸಿ: ಡಾ.ಹೆಚ್.ಸಿ.ಮಹದೇವಪ್ಪ

ಸಂಭ್ರಮದಿಂದ ಪ್ರವಾಸೋದ್ಯಮ ದಿನ ಆಚರಿಸಿ: ಡಾ.ಹೆಚ್.ಸಿ.ಮಹದೇವಪ್ಪ

0

ಮೈಸೂರು:  ‘ಪ್ರವಾಸೋದ್ಯಮ ಮತ್ತು ಶಾಂತಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

Join Our Whatsapp Group

ನಗರದ ಜಲದರ್ಶಿನಿಯ ಅತಿಥಿಗೃಹದಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ, ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ಬ್ಲಾಗರ್ಸ್ ಮೀಟ್ ಮತ್ತು ಇತರೆ ಪ್ರವಾಸೋದ್ಯಮ ಚಟುವಟಿಕೆಗಳ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ವಿಷಯದ ಮೇಲೆ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಉತ್ತಮ ಪರಿಕಲ್ಪನೆಯಾಗಿದೆ. ಕಾರ್ಯಕ್ರಮದ ದಿನದಂದು ಅರಮನೆಯ ಮುಂಭಾಗದಲ್ಲಿ ಹೆಚ್ಚಿನ ಅತಿಥಿ ಪ್ರವಾಸಿಗರನ್ನು ಆಹ್ವಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಎಂದು ಹೇಳಿದರು.

ವಿವಿಧ ಜಾನಪದ ಕಲಾ ತಂಡಗಳ ಮೆರಣಿಗೆ, ನೃತ್ಯ ಪ್ರದರ್ಶನ ಸೇರಿದಂತೆ ಪ್ರವಾಸಿಗರ ಗಮನ ಸೆಳೆಯುವಂಥ ಕಾರ್ಯಕ್ರಮ ಆಯೋಜಿಸಿ. ಕಲಾತಂಡಗಳನ್ನು ಹೊರತುಪಡಿಸಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯ ಸಂಸ್ಕೃತಿ ಬಿಂಬಿಸುವಂಥ ಧಿರಿಸನ್ನು ಧರಿಸುವಂತೆ ಸೂಚಿಸಿದರು.

ಸೆ.12 ರಂದು ಸೋಮನಾಥಪುರ ಉತ್ಸವ

ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿರುವ ಸೋಮನಾಥಪುರದ ಉತ್ಸವವನ್ನು ಸೆಪ್ಟೆಂಬರ್ 12ರಂದು  ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಭಾರತೀಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅವರು ಮಾಹಿತಿ ನೀಡಿದರು.

ಅಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಹೊಂದಿರುವ ಬ್ಲಾಗರ್ಸ್ ಗಳನ್ನು ಕರೆಸಲಾಗುತ್ತಿದ್ದು, ಬಂದಂತಹ ಅತಿಥಿಗಳನ್ನು ಉತ್ತಮವಾಗಿ ಸತ್ಕರಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಡಿ.ಸುದರ್ಶನ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.