ಮನೆ ಅಪರಾಧ ಗಣೇಶ ಹಬ್ಬ ಆಚರಣೆ ಹಿನ್ನೆಲೆ: ಗಂಗಾವತಿಯ ಮೂವರು ರೌಡಿಗಳ ಗಡಿಪಾರು

ಗಣೇಶ ಹಬ್ಬ ಆಚರಣೆ ಹಿನ್ನೆಲೆ: ಗಂಗಾವತಿಯ ಮೂವರು ರೌಡಿಗಳ ಗಡಿಪಾರು

0

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂವರು ರೌಡಿಶೀಟರ್ ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಎಸಿ ಆದೇಶ ಹೊರಡಿಸಿದ್ದಾರೆ.

Join Our Whatsapp Group

ಗಂಗಾವತಿ ನಗರದಲ್ಲಿ ಸೆ.07 ರಿಂದ ಗೌರಿ ಗಣೇಶ ಹಬ್ಬ ಹಾಗೂ ಸೆ. 16 ರಂದು ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಗಂಗಾವತಿ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿವೆ. ಗಂಗಾವತಿ ನಗರವು ಮತೀಯವಾಗಿ ಸೂಕ್ಷ್ಮ ನಗರವಾಗಿದೆ. ಸಣ್ಣ – ಪುಟ್ಟ ಗಲಾಟೆ ದೊಡ್ಡದಾಗಿ ಕೋಮು ಗಲಭೆ ಸ್ವರೂಪ ಪಡೆಯುವ ಸಾಧ್ಯತೆ ಇರುತ್ತವೆ.

ಈ ಹಿನ್ನೆಲೆಯಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆ ರೌಡಿಗಳಾದ ಸಚಿನ ನಿಂಬಲಗುಂದಿ, ಸಂದೀಪ ತಂದೆ ಸಂಜೀವಪ್ಪ, ಅರ್ಬಜ್ ಖಾನ್ ತಂದೆ ಸರ್ದಾರಖಾನ್‌ ಇವರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಕೃತ್ಯವೆಸಗುವ ಸಾಧ್ಯತೆ ಇರುತ್ತದೆ. ಗಣೇಶ ಹಬ್ಬದ ಮೆರವಣಿಗೆಯಲ್ಲಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡುವ ಸಾಧ್ಯತೆ ಇರುತ್ತದೆ. ಈ ರೌಡಿಗಳ ಚಟುವಟಿಕೆ ನಿಯಂತ್ರಸಲು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಮೂವರನ್ನು ಗಡಿಪಾರು ಮಾಡಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕಲಂ 54, 55 ಕರ್ನಾಟಕ ಪೊಲೀಸ್ ಕಾಯ್ದೆ 1963 ರಡಿ ಕೊಪ್ಪಳ ಎಸಿ ಅವರು ಸೆ.04 ರಿಂದ ಸೆ. 30ರ ವರೆಗೂ ಕೊಪ್ಪಳ ಜಿಲ್ಲೆಯಿಂದ ಕ್ರಮವಾಗಿ ಬೀದರ್ ಜಿಲ್ಲೆ, ಚಾಮರಾಜನಗರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ.