ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುತ್ತಿರುವ CIDವಿಶೇಷ ತನಿಖಾ ತಂಡವು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2ನೇ ಆರೋಪಪಟ್ಟಿಯನ್ನು ಸಲ್ಲಿಸಿದೆ. 60 ವರ್ಷದ ಮನೆ ಕೆಲಸದಾಕೆ ಕೈ ಮುಗಿದು ಬೇಡಿಕೊಂಡರೂ ಬಿಡದೆ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೋ ಮಾಡಿಕೊಂಡಿರುವ ಬಗ್ಗೆ ಅದರಲ್ಲಿ ಉಲ್ಲೇಖೀಸಲಾಗಿದೆ.
ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಸುಮಾರು 60 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ವೀಡಿಯೋ ಮಾಡಿಕೊಂಡಿದ್ದರ ಸಹಿತ ಪ್ರಜ್ವಲ್ ವಿರುದ್ಧ 1,652 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ. ಸಿಆರ್‌ಪಿಸಿ 164ರ ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಲಾಗಿದೆ. 113 ಮಂದಿ ಸಾಕ್ಷಿದಾರರು ಹಾಗೂ ಡಿಜಿಟಲ್ ಸಾಕ್ಷ್ಯಾಧಾರ, FSL ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
ಕೆಲಸದಾಕೆ ಮೇಲೆ ಅತ್ಯಾಚಾರ
ಹೊಳೆನರಸೀಪುರದಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ 60 ವರ್ಷದ ಸಂತ್ರಸ್ತೆಯನ್ನು ಆರೋಪಿ ಪ್ರಜ್ವಲ್ ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಕೃತ್ಯ ಎಸಗುವಾಗ ತನ್ನದೇ ಮೊಬೈಲ್ ನಲ್ಲಿ ವೀಡಿಯೋ ಮಾಡಿರುವುದು ಪತ್ತೆಯಾಗಿದೆ. ಸಂತ್ರಸ್ತೆ ಕೈ ಮುಗಿದು ಬಿಟ್ಟುಬಿಡುವಂತೆ ಕೋರಿದರೂ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ವೀಡಿಯೊ ವೈರಲ್ ಆದ ಬಳಿಕ ಮೇ 5ರಂದು ಎಸ್‌ಐಟಿಯು ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು.
ಇದಲ್ಲದೆ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಂಬಂಧ ಪ್ರಜ್ವಲ್ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ CIDಎಸ್‌ಐಟಿ ತನಿಖೆ ನಡೆಸಿದೆ. ಈ ಪೈಕಿ 47 ವರ್ಷದ ಮಹಿಳೆಯು ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಎಸ್‌ಐಟಿಯು ಆ. 23ರಂದು ತಂದೆ-ಮಗನ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಎರಡನೇ ಪ್ರಕರಣದಲ್ಲಿ ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಮತ್ತೆರಡು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿವೆ ಎಂದು ಎಸ್‌ಐಟಿ ತಿಳಿಸಿದೆ.