ಮನೆ ಅಪರಾಧ ಜಿಎಸ್ಟಿ ಅಧಿಕಾರಿಗಳಿಂದ ಉದ್ಯಮಿ ಕಿಡ್ನ್ಯಾಪ್, ಸುಲಿಗೆ: ನಾಲ್ವರ ಬಂಧನ

ಜಿಎಸ್ಟಿ ಅಧಿಕಾರಿಗಳಿಂದ ಉದ್ಯಮಿ ಕಿಡ್ನ್ಯಾಪ್, ಸುಲಿಗೆ: ನಾಲ್ವರ ಬಂಧನ

0

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಅಪಹರಿಸಿ, ಹಲ್ಲೆ ನಡೆಸಿದಲ್ಲದೆ,

Join Our Whatsapp Group

1.5 ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಕೇಂದ್ರ ಜಿಎಸ್‌ಟಿಯ ಬೆಂಗಳೂರು ದಕ್ಷಿಣ ವಿಭಾಗದ ಅಧೀಕ್ಷಕ ಸೇರಿ ನಾಲ್ವರು ಬೈಯಪ್ಪನಹಳ್ಳಿ ಮತ್ತು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ದಕ್ಷಿಣ ಕಮಿಷನರೇಟ್‌ ವಿಭಾಗದ ಕೇಂದ್ರ ಆದಾಯ ತೆರಿಗೆ ಅಧೀಕ್ಷಕ ಅಭಿಷೇಕ್‌ (34), ಜಿಎಸ್‌ಟಿ ಗುಪ್ತಚರ ವಿಭಾಗದ ಹಿರಿಯ ಅಧಿಕಾರಿ ಮನೋಜ್‌ ಸೈನಿ (39), ನಾಗೇಶ್‌ ಬಾಬು (35) ಮತ್ತು ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್‌(30) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 32 ಮೊಬೈಲ್‌ಗ‌ಳು, 2 ಲ್ಯಾಪ್‌ಟಾಪ್‌ಗ್ಳು, 50 ಚೆಕ್‌ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಇತ್ತೀಚೆಗೆ ಆ.30ರಂದು ಕೇಶವ್‌ ತಕ್‌ ಎಂಬುವರ ಮನೆಗೆ ನುಗ್ಗಿ, ಕೇಶವ್‌ ತಕ್‌ ಹಾಗೂ ಅವರು ಮೂವರು ಕುಟುಂಬ ಸದಸ್ಯರನ್ನು ಅಪಹರಿಸಿ, ಅವರ ಕಚೇರಿಯಲ್ಲೇ ಗೃಹ ಬಂಧನದಲ್ಲಿರಿಸಿದ್ದರು. ಅಲ್ಲದೆ, 1.5 ಕೋಟಿ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಕೇಶವ್‌ ತಕ್‌ ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆಯಾಗಿದ್ದು, ಇಬ್ಬರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಜಿ.ಎಂ. ಪಾಳ್ಯದಲ್ಲಿ ವಾಸವಾಗಿರುವ ದೂರುದಾರ ಕೇಶವ ತಕ್‌, ಜೀವನ್‌ ಭೀಮಾನಗರದಲ್ಲಿ ಮ್ಯಾಕೆ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿ ನಡೆಸುತ್ತಿದ್ದಾರೆ. ಈ ಮಧ್ಯೆ ಆ.30ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಗೆ ನುಗ್ಗಿದ್ದಾರೆ. ಬಳಿಕ ಎಲ್ಲರ ಮೊಬೈಲ್‌ಗ‌ಳನ್ನು ಕಸಿದುಕೊಂಡು, ಕೇಶವ್‌ ತಕ್‌, ಪವನ್‌ ತಕ್‌, ಮುಖೇಶ್‌ ಜೈನ್‌, ರಾಕೇಶ್‌ ಮಾಣಕ್‌ ಚಾಂದನಿ ಅವರನ್ನು ಅಪಹರಿಸಿ 2 ಕಾರುಗಳಲ್ಲಿ ಕೂರಿಸಿಕೊಂಡು ದೂರುದಾರರ ಕಚೇರಿಗೆ ಕರೆದೊಯ್ದು, ಹಲ್ಲೆ ನಡೆಸಿ ಅಲ್ಲಿಯೇ ಗೃಹ ಬಂಧನದಲ್ಲಿ ಇರಿಸಿದ್ದರು. ಈ ವೇಳೆ ಆರೋಪಿ ಮನೋಜ್‌ ತಾನೂ ಹಿರಿಯ ಜಿಎಸ್‌ಟಿ ಅಧಿಕಾರಿ ಎಂದು ಹೇಳಿ, ಕೇಶವ್‌ ತಕ್‌ನನ್ನು ಇಂದಿರಾನಗರಕ್ಕೆ ಕರೆದೊಯ್ದು ಮೊಬೈಲ್‌ನ ಹಾಟ್‌ ಸ್ಪಾಟ್‌ ಆನ್‌ ಮಾಡಿ ರೋಷನ್‌ ಜೈನ್‌ ಎಂಬಾತನಿಗೆ ಕರೆ ಮಾಡಿಸಿದ್ದಾನೆ. ಬಳಿಕ 3 ಕೋಟಿ ರೂ. ತಂದು ಕೊಡು ವಂತೆ ಹೇಳಿಸಿದ್ದಾರೆ. ಬಳಿಕ ಮತ್ತೆ ದೂರುದಾರರ ಕಚೇ ರಿಗೆ ಕರೆತಂದು, ಆ.31ರಂದು ಬೆಳಗ್ಗೆ 10.30ರ ಸುಮಾ ರಿಗೆ ನಗರದ ಕೆಲ ಸ್ಥಳಗಳಿಗೆ ಕರೆದೊಯ್ದು ವಾಪಸ್‌ ಕರೆತಂದಿದ್ದಾರೆ. ಇನ್ನು ತನ್ನ ಸ್ನೇಹಿತ ರೋಷನ್‌ ಜೈನ್‌ ಹಣ ತಂದುಕೊಡಲು ತಡ ಮಾಡಿದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಕೇಶವ್‌ ತಕ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಮತ್ತೂಂದೆಡೆ ದೂರುದಾರರ ಒತ್ತಾಯದ ಮೇರೆಗೆ ರೋಷನ್‌ ಜೈನ್‌ 1.5 ಕೋಟಿ ರೂ. ಅನ್ನು ಅಂಗಾಡಿಯ ಎಂಬಾತನ ಬಳಿ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಆದರಿಂದ ಸೆ.1ರಂದು ನಸುಕಿನ 3 ಗಂಟೆ ಸುಮಾರಿಗೆ ಎಲ್ಲರಿಂದಲೂ ಸಹಿ ಪಡೆದುಕೊಂಡು ಬಿಟ್ಟು ಕಳುಹಿಸಿದ್ದರು. ಸೆ.2ರಂದು ಅನುಮಾನಗೊಂಡ ದೂರುದಾರ ಕೇಶವ್‌ ತಕ್‌, ಕೆಲ ಅಧಿಕಾರಿಗಳ ಬಳಿ ವಿಚಾರಣೆ ನಡೆಸಿದಾಗ ಅಧಿಕಾರ ದುರ್ಬಳಕೆ ಪತ್ತೆಯಾಗಿದೆ. ಹೀಗಾಗಿ ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಬೆದರಿಸಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಅಕ್ರಮ ದಾಳಿಗೆ ಖಾಸಗಿ ವಾಹನಗಳ ಬಳಕೆ: ಪ್ರಕರಣದ ತನಿಖೆಯಲ್ಲಿ ನಾಲ್ವರು ಆರೋಪಿಗಳು, ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ದಾಳಿ ಮಾಡಿ, ಹಲವಾರು ವಸ್ತುಗಳನ್ನು ಜಪ್ತಿ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, ಎರಡು ದಿನಗಳ ಕಾಲ ದೂರುದಾರ ಹಾಗೂ ಕುಟುಂಬ ಸದಸ್ಯರನ್ನು ಅಕ್ರಮವಾಗಿ ಬಂಧನಲ್ಲಿಸಿರುವುದು ಕಂಡು ಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಆರೋಪಿಗಳು ಇದೇ ಮಾದರಿಯಲ್ಲಿ ಬೇರೆ ಬೇರೆ ಉದ್ಯಮಿಗಳಿಂದಲೂ ಕೋಟ್ಯಂತರ ರೂ. ಸುಲಿಗೆ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ಪತ್ತೆಯಾಗಿದೆ. ಜೊತೆಗೆ ಈ ರೀತಿ ಅಕ್ರಮ ದಾಳಿಗೆ ಖಾಸಗಿ ವಾಹನಗಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ನಕಲಿ ದಾಖಲೆ ನೀಡಿ 32 ಮೊಬೈಲ್‌ ಖರೀದಿ: ಆರೋಪಿಗಳ ಪೈಕಿ ಮನೋಜ್‌, ನಾಗೇಶ್‌ ಬಾಬು ಹಾಗೂ ಸೋನಾಲಿ ಸಹಾಯ್‌ ಕೇಶವ್‌ ತಕ್‌ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅವರ ಕೋಟ್ಯಂತರ ರೂ. ವ್ಯವಹಾರ ಹಾಗೂ ಜಿಎಸ್‌ಟಿ ಪಾವತಿ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ದಾಳಿ ನಡೆಸಿ, ಸುಲಿಗೆ ಮಾಡಿದ್ದಾರೆ. ಅಲ್ಲದೆ, ಆರೋಪಿಗಳು ನಕಲಿ ದಾಖಲೆಗಳನ್ನು ನೀಡಿ ಸಿಮ್‌ ಕಾರ್ಡ್‌ಗಳನ್ನು ಪಡೆದುಕೊಂಡು ಇದೇ ರೀತಿಯ ಅಕ್ರಮ ಎಸಗಲು 32 ಮೊಬೈಲ್‌ಗ‌ಳನ್ನು ಬಳಸಿರುವ ಮಾಹಿತಿ ಇದೆ. ಇನ್ನು ಪತ್ತೆಯಾಗಿರುವ 50 ಚೆಕ್‌ ಬುಕ್‌ಗಳು ಯಾರ ಖಾತೆದಾರರದ್ದು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.