ತುಮಕೂರು: ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಪ್ರಕಟಿಸಿದರು.
ಮುಂದಿನ ದಿನಗಳಲ್ಲಿ ವಿಧಾನಸಭೆ ಸೇರಿದಂತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಬೇಕಾದವರನ್ನು ಗೆಲ್ಲಿಸುವುದು, ಬೇಡದವರನ್ನು ಸೋಲಿಸುವ ಕೆಲಸ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾನು ಪ್ರತಿನಿಧಿಸುವ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವ ಪ್ರಯತ್ನ ಮುಂದುವರಿಸುತ್ತೇನೆ. ನನ್ನ ಅಧಿಕಾರ ಮುಗಿಯುವುದರ ಒಳಗೆ ಜಿಲ್ಲಾ ಕೇಂದ್ರ ಮಾಡಿಸುತ್ತೇನೆ. ಜತೆಗೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇನೆ. ಮುಂದಿನ ಚುನಾವಣೆ ದೃಷ್ಟಿಯನ್ನು ಇಟ್ಟುಕೊಂಡು ಈ ಕೆಲಸ ಮಾಡಿಸುತ್ತಿಲ್ಲ. ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.














