ಮನೆ ಅಪರಾಧ ಅಕ್ರಮವಾಗಿ ನಟಿಯನ್ನು ಬಂಧಿಸಿದ ಆರೋಪ: 3 ಐಪಿಎಸ್ ಅಧಿಕಾರಿಗಳು ಅಮಾನತು

ಅಕ್ರಮವಾಗಿ ನಟಿಯನ್ನು ಬಂಧಿಸಿದ ಆರೋಪ: 3 ಐಪಿಎಸ್ ಅಧಿಕಾರಿಗಳು ಅಮಾನತು

0

ಹೈದರಾಬಾದ್: ನಟಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಹಿರಿಯ ಐಪಿಎಸ್ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆಂಧ್ರ ಪ್ರದೇಶ ಭಾನುವಾರ(ಸೆ.15ರಂದು) ಸರ್ಕಾರ ಆದೇಶ ಹೊರಡಿಸಿದೆ.

Join Our Whatsapp Group

ಮುಂಬೈ ಮೂಲದ ನಟಿ ಕಾದಂಬರಿ ಜೇತ್ವಾನಿ ತನ್ನನ್ನು ಯಾವುದೇ  ಸೂಕ್ತ ತನಿಖೆ ನಡೆಸದೆ ಅಕ್ರಮವಾಗಿ ಬಂಧಿಸಿ, ಕಿರುಕುಳ ನೀಡಿದ ಆರೋಪವನ್ನು ಮಾಡಿ ಇತ್ತೀಚೆಗೆ ಎನ್ ಟಿಆರ್ ಪೊಲೀಸ್ ಆಯುಕ್ತ ಎಸ್.ವಿ. ರಾಜಶೇಖರ್ ಬಾಬು ಬಳಿ ಕ್ರಮಕ್ಕೆ ಆಗ್ರಹಿಸಿದ್ದರು.

ಇದಲ್ಲದೆ  ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಯೊಬ್ಬರು ತನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಇಬ್ರಾಹಿಂಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇತ್ತೀಚೆಗೆ ಖಾಸಗಿ ಚಾನೆಲ್‌ ವೊಂದರಲ್ಲಿ ಲೈವ್‌ನಲ್ಲಿ ಮಾತನಾಡುತ್ತಾ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ   ಅವರ ವೈಎಸ್‌ಆರ್‌ಸಿಪಿ  ಪಕ್ಷದ ನಾಯಕ ವಿದ್ಯಾಸಾಗರ್‌) ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಹಣ ಹಾಗೂ ಅಧಿಕಾರದ ದುರ್ಬಳಕೆ ಮಾಡಿಕೊಂಡು ನನ್ನ ಹಾಗೂ ನನ್ನ ಕುಟುಂಬದ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದರು.

ಅಂದಿನ ಆಂಧ್ರ ಸರ್ಕಾರದ ಆದೇಶದ ಮೇರೆಗೆ ಅದೊಂದು ದಿನ ಮುಂಬೈನಲ್ಲಿನ ನನ್ನ ಮನೆಗೆ ಆಂಧ್ರ ಪೊಲೀಸರು ದಾಳಿ ಮಾಡಿದ್ದರು. ನನ್ನನ್ನು ಅಪಹರಿಸಿ, ನನ್ನ ತಂದೆ – ತಾಯಿಯನ್ನು ಜೈಲಿಗಟ್ಟಿದ್ದರು. ನಕಲಿ ದಾಖಲೆ ಸೃಷ್ಟಿಸಿ ನನ್ನ ಮೇಲೆ ದೂರು ದಾಖಲಿಸಿ ಸುಮಾರು 45 ದಿನಗಳ ಕಾಲ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರು ಎಂದು ಹೇಳಿದ್ದರು.

ನಟಿ ಕೊಟ್ಟ ದೂರಿನ ಬಗ್ಗ ತನಿಖೆ ನಡೆಸಿದ ಆಂಧ್ರಪ್ರದೇಶ ಪೊಲೀಸರು ಆರೋಪಗಳ ವಿಚಾರಣೆ ನಡೆಸಿ 1992, 2004 ಮತ್ತು 2010ರ ಬ್ಯಾಚ್ ಅಧಿಕಾರಿಗಳ ವಿರುದ್ಧ ಕಾರ್ಯವಿಧಾನದ ಲೋಪ, ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಪಿಎಸ್ ಆರ್ ಆಂಜನೇಯುಲು (ಡಿಜಿ ಶ್ರೇಣಿ), ಕಂಠಿ ರಾಣಾ ಟಾಟಾ (ಐಜಿ ಶ್ರೇಣಿ) ಮತ್ತು ವಿಶಾಲ್ ಗುನ್ನಿ (ಎಸ್‌ಪಿ ಶ್ರೇಣಿ) ಎಂಬ ಮೂವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಹೆಚ್ಚುವರಿಯಾಗಿ ಮಾಜಿ ಪಶ್ಚಿಮ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕೆ ಹನುಮಂತ ರಾವ್ ಮತ್ತು ಮಾಜಿ ಇಬ್ರಾಹಿಂಪಟ್ಟಣಂ ಇನ್ಸ್‌ಪೆಕ್ಟರ್ ಎಂ ಸತ್ಯನಾರಾಯಣ ಅವರನ್ನು ಈ ಹಿಂದೆಯೇ ಪ್ರಕರಣ ಸಂಬಂಧ ಅಮಾನತುಗೊಳಿಸಲಾಗಿದೆ.

ಗುಜರಾತ್‌ ಮೂಲದ ಕಾದಂಬರಿ ಜೇತ್ವಾನಿ ಬಣ್ಣದ ಲೋಕ್ಕೆ ಕಾಲಿಡುವ ಮುನ್ನ ಮುಂಬೈನಲ್ಲಿ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು. 2012ರಲ್ಲಿ ಬಂದ ʼಸಡ್ಡಾ ಅಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ 2015ರಲ್ಲಿ ಬಂದ ‘ಯೂಜಾ’ ಎನ್ನುವ ತೆಲುಗು ಚಿತ್ರಕ್ಕೆ ನಾಯಕಿಯಾಹಿ ಆಯ್ಕೆ ಆಗಿದ್ದರು.