ಮೈಸೂರು: ಅತ್ತೆ ಮಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಭಗ್ನಪ್ರೇಮಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಮೈಸೂರಿನ ಲಿಂಗಾಂಬುದಿ ಪಾಳ್ಯದ ಸಿದ್ದರಾಮಯ್ಯ ನಗರದಲ್ಲಿ ನಡೆದಿದೆ.
ಮಹದೇವು ರವರ ಪುತ್ರ ರವಿ (26) ಎಂಬಾತನೇ ನಾಪತ್ತೆಯಾಗಿರುವುದು ಡೆತ್ ನೋಟ್ ಬರೆದಿಟ್ಟು ರವಿ ಒಂದು ವಾರದಿಂದ ಕಾಣೆಯಾಗಿದ್ದು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ನಾಲ್ಕು ವರ್ಷಗಳಿಂದ ಅತ್ತೆ ಮಗಳು ವಾಣಿಶ್ರೀಯನ್ನ ರವಿ ಪ್ರೀತಿಸುತ್ತಿದ್ದ. ವಾಣಿಶ್ರೀ ಸಹ ರವಿಯನ್ನ ಪ್ರೀತಿಸುತ್ತಿದ್ದಳು. ಹದಿನೈದು ದಿನಗಳ ಹಿಂದೆ ವಾಣಿಶ್ರೀ ಯೂ ಟರ್ನ್ ಹೊಡೆದಿದ್ದಾಳೆ. ತಾನು ಪ್ರೀತಿಸುತ್ತಿಲ್ಲವೆಂದು ಹೇಳಿದ್ದಲ್ಲದೆ ರವಿ ಬಗ್ಗೆ ಚಿಕ್ಕಪ್ಪ ಹಾಗೂ ಮಾವನ ಬಳಿ ಇಲ್ಲಸಲ್ಲದ ದೂರು ನೀಡಿದ್ದಾಳೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತ ರವಿ ಸೆಪ್ಟೆಂಬರ್ 10 ರಂದು ಮನೆ ಬಿಟ್ಟಿದ್ದಾನೆ.
ರವಿ ಮಲಗುವ ಹಾಸಿಗೆ ಕೆಳಗೆ ಪರಿಶೀಲಿಸಿದಾಗ ಡೆತ್ ನೋಟ್ ದೊರೆತಿದ್ದು, ಇಷ್ಟು ದಿನ ಲವ್ ಮಾಡಿ ಈಗ ಪ್ರೀತಿಸಿಲ್ಲವೆಂದು ಹೇಳಿ ನನ್ನ ಮತ್ತು ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದ್ದಲ್ಲದೆ ಮನೆಯವರಿಗೆ ಅವಮಾನ ಮಾಡಿ ಸಂಬಂಧಿಕರ ಬಳಿ ಇಲ್ಲಸಲ್ಲದ ಕಂಪ್ಲೇಂಟ್ ಮಾಡಿ ನೆಮ್ಮದಿ ಹಾಳು ಮಾಡಿದ್ದಾರೆ.
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಯಾರೂ ಹುಡುಕಬೇಡಿ. ಇದಕ್ಕೆಲ್ಲಾ ಕಾರಣ ಮಾವ ಮಹದೇವ, ಚಿಕ್ಕಪ್ಪ ಮಹದೇವಮೂರ್ತಿ, ವಾಣಿಶ್ರೀ ಕಾರಣ ಎಂದು ಡೆತ್ ನೋಟ್ ಬರೆದು ರವಿ ನಾಪತ್ತೆಯಾಗಿದ್ದಾನೆ. ರವಿಗಾಗಿ ಕುಟುಂಬಸ್ಥರು ಹುಡುಕಾಡಿ ಹೈರಾಣಾಗಿದ್ದಾರೆ. ಮಗನ ನಾಪತ್ತೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ರವಿ ತಂದೆ ಮಹದೇವು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.