ಮನೆ ಅಪರಾಧ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 30 ಮಂದಿ ಬಂಧನ

ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 30 ಮಂದಿ ಬಂಧನ

0

ದಾವಣಗೆರೆ: ದಾವಣಗೆರೆ ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಳಗಿನ ಜಾವದವರೆಗೆ 30 ಆರೋಪಿಗಳನ್ನು ಬಂಧಿಸಿದ್ದಾರೆ.

Join Our Whatsapp Group

ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಮನೆಗಳಿಗೆ ನುಗ್ಗಿ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಲಾಠಿ ಏಟು ಬೀಳುತ್ತಿದ್ದಂತೆ ಆರೋಪಿಗಳು ‘ನಾವು ಕಲ್ಲು ಎಸೆದಿಲ್ಲ’ ಎಂದು ಗೋಳಾಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಒಟ್ಟು 4 ಪೊಲೀಸ್ ಠಾಣೆಗಳಲ್ಲಿ 4 ಎಫ್ ಐಆರ್ ಗಳು ದಾಖಲಾಗಿವೆ‌.

ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಗುರುವಾರ ರಾತ್ರಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಗಲಾಟೆ ನಡೆದಿತ್ತು. ಘಟನೆಯಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಗಾಯವಾಗಿವೆ.

ಬೇತೂರು ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ರಾತ್ರಿ 7.30ರ ವೇಳೆಗೆ ವೆಂಕಟೇಶ್ವರ ದೇವಸ್ಥಾನದ ವೃತ್ತಕ್ಕೆ ಬಂದಾಗ ಕೆಲವರು ಘೋಷಣೆ ಕೂಗಿದ್ದರಿಂದ ಗಲಭೆ ಆರಂಭವಾಗಿದೆ. ಏಕಾಏಕಿ ಒಂದು ಗುಂಪಿನ ಮೇಲೆ ಕಲ್ಲು ತೂರಾಟ ನಡೆದಿದೆ.

ಬಂದೋಬಸ್ತ್‌ಗೆ ನಿಯುಕ್ತರಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಅನ್ನಪೂರ್ಣಾ, ರಘು ಅವರಿಗೆ ಕಲ್ಲು ಬಡಿದು ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಸಂದರ್ಭ ಪೊಲೀಸ್‌ ಸಿಬ್ಬಂದಿ ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪನ್ನು ಚದುರಿಸಿದ್ದರು.

ಗಲಭೆ ಆರಂಭವಾಗುತ್ತಿದ್ದಂತೆಯೇ ಅಂಗಡಿ– ಮುಂಗಟ್ಟುಗ ಳನ್ನು ಬಂದ್‌ ಮಾಡಿಸಲಾಗಿತ್ತು. ನಗರದಲ್ಲಿ ಹೆಚ್ಚುವರಿಯಾಗಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಸದ್ಯ ವಾತಾವರಣ ಸಹಜ ಸ್ಥಿತಿಗೆ ಬಂದಿದೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿವೆ.

ಕಾನೂನು- ಸುವ್ಯವಸ್ಥೆಗೆ  ಧಕ್ಕೆ ತಂದರೆ ನಿರ್ಧಾಕ್ಷಿಣ್ಯ ಕ್ರಮ: ಪೂರ್ವ ವಲಯ ಐಜಿಪಿ ರಮೇಶ್ ಬಿ. ಖಡಕ್ ಎಚ್ಚರಿಕೆ

ನಗರದಲ್ಲಿ ಯಾರೇ ಕೋಮುಭಾವನೆ ಕೆರಳಿಸುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ವ ವಲಯ ಐಜಿಪಿ ರಮೇಶ್ ಬಿ. ಎಚ್ಚರಿಸಿದರು.

ಗುರುವಾರ ರಾತ್ರಿ ಗಣೇಶ ಮೆರವಣಿಗೆ ವೇಳೆ ನಗರದಲ್ಲಿ ಕಲ್ಲು ತೂರಾಟ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 30 ಜನರನ್ನ ಬಂಧಿಸಲಾಗಿದೆ. ರಾತ್ರಿಯಿಡೀ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೆರವಣಿಗೆ ಅಲ್ಲದೇ ಜನವಸತಿ ಪ್ರದೇಶದಲ್ಲಿ ಸಹ‌ ಕಲ್ಲು ತೂರಾಟ ನಡಸಲಾಗಿದೆ. ಈ ಬಗ್ಗೆ ಕೂಡಾ ಎಫ್ ಐಆರ್ ಆಗಿದೆ ಎಂದು ತಿಳಿಸಿದರು‌.

ಈ ಘಟನೆ ನಡೆಯಲು ಮುಖ್ಯ ಕಾರಣ ಟವರ್ ಗೆ ಧ್ವಜ ಹಾಕಿದ ಘಟನೆ. ಅದಾದ ಮೇಲೆ ಅಲ್ಲಿನ ಮುಖಂಡರು ನೀಡಿದ ಹೇಳಿಕೆ ಕಾರಣ. ಯಾರೇ ಆಗಲಿ‌ ಸೂಕ್ತ ಕಾನೂನು ಕ್ರಮ‌ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.