ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ಜತೆ ವಿಶೇಷ ಆತಿಥ್ಯ ಸ್ವೀಕರಿಸಿದ ಪ್ರಕರಣದಲ್ಲಿ ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಹಾಗೂ ಆತನ ಸಹಚರ ವೇಲುನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಈ ಮಧ್ಯೆ ವಿಲ್ಸನ್‌ಗಾರ್ಡನ್ ನಾಗನನ್ನು ಬೆಳಗಾವಿಯ ಹಿಂಡಾಲಗ ಜೈಲಿಗೆ ಸ್ಥಳಾಂತರಿಸಲು ಕೋರ್ಟ್ ಅನುಮತಿ ನೀಡಿದ್ದು, ಪೊಲೀಸರ ವಿಚಾರಣೆ ಬಳಿಕ ಆರೋಪಿಯನ್ನು ಸ್ಥಳಾಂತರಿಸಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ 9ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸಿದ್ದ ಪೊಲೀಸರು, ಆರೋಪಿಯಯನ್ನು ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡುವಂತೆ ಕೋರಿದರು. ಆದರೆ, ಕೋರ್ಟ್ ಸೆ.21ರ ಸಂಜೆ 5 ಗಂಟೆವರೆಗೂ (2 ದಿನ) ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ವಿಲ್ಸನ್ ಗಾರ್ಡನ್ ನಾಗ, ನಟ ದರ್ಶನ್, ಕುಳ್ಳ ಸೀನಾ ಹಾಗೂ ದರ್ಶನ್ ಮ್ಯಾನೇಜರ್ ನಾಗರಾಜು ಕುರ್ಚಿಗಳಲ್ಲಿ ಕುಳಿತುಕೊಂಡು ವಿಶೇಷ ಆತಿಥ್ಯ ಸ್ವೀಕರಿಸಿದ್ದರು. ದರ್ಶನ್‌ನ ಒಂದು ಕೈನಲ್ಲಿ ಕಾಫಿ ಮಗ್, ಇನ್ನೊಂದು ಕೈಯಲ್ಲಿ ಸಿಗರೆಟು ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವರು, ಜೈಲಿನ ಮುಖ್ಯ ಅಧೀಕ್ಷಕರು ಸೇರಿ 10 ಮಂದಿ ಅಧಿಕಾರಿ-ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು. ಬಳಿಕ ಕೋರ್ಟ್ ಆದೇಶದ ಮೇರೆಗೆ, ದರ್ಶನ್‌ನನ್ನು ಬಳ್ಳಾರಿ ಜೈಲು ಹಾಗೂ ಆತನ ಸಹಚರರನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು 3 ಪ್ರಕರಣಗಳು ದಾಖಲಾಗಿವೆ.
ವಿಶೇಷ ಆತಿಥ್ಯ ಸ್ವೀಕರಿಸಿದ ಸಂಬಂಧ ವಿಲ್ಸನ್ ಗಾರ್ಡನ್ ನಾಗನನ್ನು ಬೇರೆಡೆ ಸ್ಥಳಾಂತರ ಮಾಡು ವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಕಾರಾಗೃಹ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು, ಆರೋಪಿಯ ಸ್ಥಳಾಂತರಕ್ಕೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಬೆಳಗಾವಿಯ ಹಿಂಡಾಲಗ ಜೈಲಿಗೆ ಸ್ಥಳಾಂತರ ಮಾಡಲು ಸೂಚಿಸಿದೆ. ಈ ಮಧ್ಯೆ ವಿಶೇಷ ಆತಿಥ್ಯ ಸ್ವೀಕರಿಸಿದ ಪ್ರಕರಣದಲ್ಲಿ ಕೋರ್ಟ್ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿರುವುದರಿಂದ ಭಾನುವಾರದ ಬಳಿಕ ಹಿಂಡಾಲಗದ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಜೈಲಿನ ಮೂಲಗಳು ತಿಳಿಸಿವೆ.