ಮನೆ ರಾಜ್ಯ ಜನಸ್ಪಂದನ ಕಾರ್ಯಕ್ರಮ: 112 ಅರ್ಜಿಗಳ ಸ್ವೀಕಾರ

ಜನಸ್ಪಂದನ ಕಾರ್ಯಕ್ರಮ: 112 ಅರ್ಜಿಗಳ ಸ್ವೀಕಾರ

ಜನರ ಸಮಸ್ಯೆ ಕೇಳಲು ಸಮಯ ನಿಗದಿ ಮಾಡಿ - ಹೆಚ್.ಸಿ ಮಹದೇವಪ್ಪ

0

ಮೈಸೂರು: ಜನಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶ ಆಡಳಿತ ವರ್ಗ ಮತ್ತು  ಜನರ ನಡುವೆ ಹಲವಾರು ಕಂದಕಗಳು ಉದ್ಭವಿಸುತ್ತಿದ್ದು, ಸಾಮಾನ್ಯ ಜನರು ನೇರವಾಗಿ ಅಧಿಕಾರಿಗಳನ್ನು ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ, ಜನರ ಸಮಸ್ಯೆಗಳನ್ನು ಕೇಳಲು ಅಧಿಕಾರಿಗಳು ಸಮಯ ನಿಗದಿ ಮಾಡಿ ಅವರಿಗೆ ಸೂಕ್ತ ಪರಿಹಾರ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತ ವರ್ಗ ಮತ್ತು ಸಾರ್ವಜನಿಕರ ನಡುವೆ ಮಧ್ಯವರ್ತಿಗಳು ಮಧ್ಯ ಪ್ರವೇಶ ಮಾಡಿ ಸರ್ಕಾರದ ಯೋಜನೆಗಳನ್ನು ದುರುಪಯೋಗ ಮಾಡಿ, ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ನೇರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಇಟ್ಟುಕೊಂಡು , ಮುಕ್ತವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಆಯಾ ಸಂಬಂಧ ಪಟ್ಟ ಇಲಾಖೆಗಳು ಸಾರ್ವಜನಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕತೆಯಲ್ಲಿ ಆಡಳಿತವನ್ನು ನಡೆಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.  ಇಂದು 112 ಅರ್ಜಿಗಳು ಸ್ವೀಕಾರವಾಗಿದ್ದು, ಅದರಲ್ಲಿ ಕುಡಿಯುವ ನೀರಿನ ಕೊರತೆ, ಕಟ್ಟಡ ಮತ್ತು ವಸತಿ ಸಮಸ್ಯೆ, ಜಮೀನಿನ ಸಮಸ್ಯೆ,  ಇನ್ನೂ ಮುಂತಾದ ಹಲವು ಸಮಸ್ಯೆಗಳನ್ನು ಎಲ್ಲಾ ಅಧಿಕಾರಿಗಳ ಜೊತೆ ಸೇರಿ ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ  ಮತ್ತೊಮ್ಮೆ ಸಾರ್ವಜನಿಕರ ಸಮಸ್ಯೆಗಳಿಗೆ  2-3 ಗಂಟೆಗಳ ಕಾಲ ಸಮಯ ನಿಗದಿ ಮಾಡಿ ಅವರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುಳಸಿ ಶಕ್ತಿ ನಗರದ ಮಹಿಳಾ ಸಮಾಜದಲ್ಲಿ ಕಾರ್ಯನಿರ್ವಹಿಸುವ ಬಡ ಮಹಿಳೆಯರಿಗೋಸ್ಕರ, ಅವರ ಆರ್ಥಿಕ ಮತ್ತು ಸಾಮಾಜಿಕ ಹಿತ ದೃಷ್ಠಿಯಿಂದ ಸರ್ಕಾರದ ವತಿಯಿಂದ ರೂ.5 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು ಹಾಗೂ ವಿಕಲಚೇತನರೊಬ್ಬರ ಕುಟುಂಬದವರೆಲ್ಲರೂ ಅಂಧರಾಗಿದ್ದು ಅವರ ನಿವೇಶನವು ನಾಲ್ಕನೇ ಮಹಡಿಯಲ್ಲಿದ್ದು ಅದನ್ನು ಬದಲಾಯಿಸುವ ಕುರಿತು ಸಲ್ಲಿಸಿದ ಮನವಿಗೆ ಶೀಘ್ರವಾಗಿ ಬದಲಾವಣೆಯನ್ನು ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಹಿಳೆಯೊಬ್ಬಳಿಗೆ ಕೈ ಮತ್ತು ಕಾಲು ಇಲ್ಲದ ಕಾರಣ ಆಕೆಯ ಮುಂದಿನ ಜೀವನವನ್ನು ಸಾಗಿಸಲು ಅಂಗಡಿಯ ವ್ಯವಸ್ಥೆಯನ್ನು ಮಾಡಿಕೊಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಮಾತನಾಡಿ, ಸಾರ್ವಜನಿಕರ ಎಲ್ಲಾ ಸಮಸ್ಯೆಗಳನ್ನು ಸ್ವೀಕರಿಸಿ ಸೂಕ್ತ ಪರಿಹಾರ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಲಹೆ, ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿ ಉತ್ತಮ ರೀತಿಯಲ್ಲಿ ಸೂಕ್ತ ಪರಿಹಾರ ದೊರಕುವಂತೆ ಮಾಡಲಾಗುವುದು ಎಂದರು.

ಸಾರ್ವಜನಿಕರೆಲ್ಲರು ತ್ವರಿತ ಗತಿಯಲ್ಲಿ ಎಲ್ಲಾ ಅರ್ಜಿಗಳನ್ನು ಡಿಜಿಟಲ್ ರೂಪದಲ್ಲಿ ಆನ್ಲೈನ್ ಮೂಲಕ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.  ಹಾಗೂ ಅರ್ಜಿಗಳು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿದ ಒಂದು ವಾರ ಅಥವಾ 10 ದಿನಗಳೊಳಗೆ ಕಾನೂನಿನ ಅನ್ವಯ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ರೈತಾ ದಸರಾ ಹಾಗೂ ದಸರಾ ಚಲನಚಿತ್ರೋತ್ಸವದ ಪೋಸ್ಟರ್  ನ್ನು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ  ವಿಧಾನ ಪರಿಷತ್ ನ ಸದಸ್ಯ ಮಂಜೇಗೌಡ, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಮುಡಾ ಅಧ್ಯಕ್ಷರಾದ ಕೆ. ಮರಿಗೌಡ,   ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು‌