ಮನೆ ರಾಜಕೀಯ ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು (Mysuru)- ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಲಾಗಿದೆ. ಅವರ ಮಾತಿಗೆ ಕಿಮ್ಮತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾತಿಗೆ ತೂಕ ಇತ್ತು. ಆದರೀಗ ಅವರ ಪಕ್ಷದ ಕಾರ್ಯಕರ್ತರೇ ಅವರ ಮಾತನ್ನು ಕೇಳುತ್ತಿಲ್ಲ. ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣನೆ ಮಾಡಲಾಗಿದೆ. ಅವರ ಮಾತಿಗೆ ಕಿಮ್ಮತ್ತು ಇಲ್ಲ. ಕಡಗಣನೆ ಮಾಡುವಾಗ ಹೀಗೆ ಆರ್ ಎಸ್ ಎಸ್, ಮತ್ತೊಂದು ವಿಚಾರ ಸೃಷ್ಟಿಸಿ ಮುಂಚೂಣಿಗೆ ಬರಲು ಯತ್ನಿಸುತ್ತಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಸುಮ್ಮನೇ ಟೀಕೆ ಮಾಡುವ ಬದಲು ವಿರೋಧ ಪಕ್ಷವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವೀಕ್ಷಿಸಲಿ. ಆರ್ ಎಸ್ಎಸ್ ಬಗ್ಗೆ ಶೇ.1 ರಷ್ಟು ಜ್ಞಾನವಿಲ್ಲ ಎಂದರು.

ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಬಗ್ಗೆ ಅಧ್ಯಯನ ಮಾಡಿಲ್ಲ. ಅವರನ್ನು ಒಮ್ಮೆ ಆರ್ ಎಸ್ ಎಸ್ ಕಚೇರಿಗೆ ಕರೆದೊಯ್ಯುತ್ತೇವೆ. ಅವರು ಅಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲಿ. ಇಲ್ಲವೇ ಆರ್ ಎಸ್ ಎಸ್ ಕುರಿತ ಪುಸ್ತಕ ನೀಡುತ್ತೇವೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ನಾನು ಆರ್ ಎಸ್ ಎಸ್ ಬಗ್ಗೆ ತಿಳಿದುಕೊಂಡಿದ್ದೇನೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದನ್ನ ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ. ಸದ್ಯದಲ್ಲೇ ಅವರಿಗೆ ಆರ್ ಎಸ್ ಎಸ್ ಕುರಿತ ಪುಸ್ತಕ ಕಳುಹಿಸಲಾಗುವುದು ಎಂದು ಹೇಳಿದರು.

ಪಕ್ಷದ ಅಧ್ಯಕ್ಷರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಠ್ಯ ಪುಸ್ತಕ ಪರಿಷ್ಕರಣ ಸಂಬಂಧ ಸಚಿವ ನಾಗೇಶ್ ಅವರು ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದು ಹೇಳಿದರು. ಪಠ್ಯ ಪುಸ್ತಕಗಳನ್ನು ಯಾರೂ ಕೂಡ ಸರಿಯಾಗಿ ಓದದೇ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಪುಸ್ತಕ ಓದಲಿ.‌ ಕೇಸರಿಕರಣ ಬಗ್ಗೆ ಚರ್ಚೆ ಆಮೇಲೆ ಮಾಡಲಿ. ವಿಶ್ವನಾಥ್ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ,  ಹೀಗಾಗಿ ಮಾತನಾಡುತ್ತಾರೆ ಎಂದರು.