ಮನೆ ಸ್ಥಳೀಯ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಲ್ಲದ ಎತ್ತರೆತ್ತರಕ್ಕೇರುವ ಅಕ್ರಮ ಕಟ್ಟಡಗಳ ನಿರ್ಮಾಣ: ನಗರಪಾಲಿಕೆಯ ಅಧಿಕಾರಿಗಳ ಜಾಣ ಕುರುಡುತನ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಲ್ಲದ ಎತ್ತರೆತ್ತರಕ್ಕೇರುವ ಅಕ್ರಮ ಕಟ್ಟಡಗಳ ನಿರ್ಮಾಣ: ನಗರಪಾಲಿಕೆಯ ಅಧಿಕಾರಿಗಳ ಜಾಣ ಕುರುಡುತನ

0

ನಗರದ ಕಾಮಾಟಗೇರಿಯ 2ನೇ ಕ್ರ್ರಾಸ್‌ನಲ್ಲಿ ರಾಮ ಮಂದಿರದ ಪಕ್ಕದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸಿಗೆಂದು ಪಾಲಿಕೆಯಿಂದ ಲೈಸೆನ್ಸನ್ನು ತೆಗೆದುಕೊಂಡು ೫ ಅಂತಸ್ತಿನ ಮನೆಯನ್ನು ನಿರ್ಮಿಸುತ್ತಿದ್ದಾರೆ. ಈ ಕಟ್ಟಡವನ್ನು ಅಶೋಕ ರಸ್ತೆಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರಿರುವ ವರ್ತಕರೊಬ್ಬರು ಕಟ್ಟುತ್ತಿರುವುದು ಎಂದು ಸ್ಥಳಿಯರು ತಿಳಿಸಿದರು. ಕಟ್ಟಡದ ಅಕ್ರಮದ ಬಗ್ಗೆ ಜೆ.ಡಿ.ಎಸ್ ನಾಯಕರಾದ ಮಾಜಿ ಮೇಯರ್ ರವಿ ಕುಮಾರ್’ರವರು ದೂರು ನೀಡಿದ್ದರೂ ಸಹ ಕ್ರಮ ಕೈಗೊಳ್ಳದೇ ಇರುವುದು ಹಲಾವಾರು ಅನುಮಾನಗಳನ್ನು ಹುಟ್ಟು ಹಾಕುತ್ತದೆ.

Join Our Whatsapp Group

ಸದರಿ ಕಟ್ಟಡದ ಜಾಗವನ್ನು ಮಾರ್ವಾಡಿಯೊಬ್ಬರು ಖರೀದಿಸಿದ್ದು, ಇದಕ್ಕೆ ನ್ಯಾಯಾಲಯ ಮಧ್ಯಂತರ ತಡೆ ನೀಡಿತ್ತು ಅಮ್ತ್ತು ಪಾಲಿಕೆ ಅಧಿಕಾರಿಗಳು ನೋಟೀಸು ಜಾರಿ ಮಾಡಿದ್ದರು. ನೆಪಮಾತ್ರಕ್ಕೆ ಎಂಬಂತೆ ೪ ದಿನ ಮಾತ್ರ ಕೆಲಸ ನಿಂತಿತ್ತು. ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಈಗ ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ ಎಂದು ಸ್ಥಳಿಯರು ತಿಳಿಸಿದರು. ರಾಮಮಂದಿರಕ್ಕೆ ಹೊಂದಿಕೊಂಡಂತೆ ಕಟ್ಟಡ ನಿರ್ಮಾಣವಾಗುತ್ತಿದ್ದರೂ, ಮಂದಿರಕ್ಕೆ ಗಾಳಿ ಬೆಳಾಕಿನ ಅಡಚನೆ ಉಂಟಾದರೂ ಸಹ, ಮಂದಿರದ ಆಡಳಿತ ಮಂಡಳಿಯವರು ಇಲ್ಲವೇ ಮಂದಿರದ ಪದಾಧಿಕಾರಿಗಳೂ ಈ ಬಗ್ಗೆ ಚಕಾರವನ್ನೇ ಎತ್ತದಿರುವುದನ್ನು ನೋಡಿದರೆ ಅವರಿಗೆ ರಾಮಮಂದಿರಕ್ಕಿಂತ ಮಾಲೀಕನ ಎಂಜಲು ಕಾಸಿನ ಪ್ರಭಾವವೇ ಮುಖ್ಯವಾಗಿದೆ.

ಇನ್ನು ಜನಪ್ರತಿನಿಧಿ ಎನಿಸಿಕೊಂಡವರ ಬಳಿ ಹೋಗಿ ಕೇಳಿದರೆ ‘ಅಯ್ಯೋ ಬಿಡಿ ಎಲ್ಲರು ಮಾಡೋದು ಇದನ್ನೇ ಇವರೊಬ್ಬರೇನಲ್ಲ’ ಎಂದು ಅಕ್ರಮ ಕಾರ್ಯಗಳನ್ನು ಬೆಂಬಲಿಸುವ ರೀತಿಯಲ್ಲಿ ಉತ್ತರವನ್ನು ಕೊಡುತ್ತಾರಷ್ಟೆ. ಈ ಬಡಾವಣೆ ಬಹಳ ಕಿರಿದಾಗಿರುವುದರಿಂದ ಇಲ್ಲಿ ಯಾರೂ ನಿಯಮಾನುಸಾರವಾಗಿ ಮನೆ ಕಟ್ಟಲು ಸಾಧ್ಯವೇ ಇಲ್ಲ ಹಾಗಾಗಿ ಎಲ್ಲರೂ ಒತ್ತೊತ್ತಾಗಿ ಕಟ್ಟುತ್ತಿದ್ದಾರೆ ಎಂದು ಇದೇ ಪ್ರದೇಶದ ನಿವಾಸಿ ಪಕ್ಕದ ವಾರ್ಡಿನ ಕಾರ್ಪೊರೇಟರ್ ರಮಣಿ ಸಮರ್ಥಿಸಿಕೊಂಡರು.

Oplus_131072

 ‘ಪಾಲಿಕೆ ಆಧಿಕಾರಿಗಳು ನಿರ್ಮಾಣ ಕಾರ್ಯವನ್ನು ನೋಡಿಕೊಂಡು ಹೋಗಿದ್ದಾರೆ ಎಂದ ಮೇಲೆ ಅಕ್ರಮ ಸಕ್ರಮ ಮಾಡುವಾಗ ಮಾಲೀಕರಿಗೆ ಹೆಚ್ಚು ಪ್ರಮಾಣದಲ್ಲಿ ದಂಡ ಬೀಳುತ್ತದೆ ಬಿಡಿ ಸರ್ಕಾರಕ್ಕೂ ಲಾಭನೇ’ ಎಂದು ತಮಗೇನೋ ಸಂಬಂಧವೇ ಇಲ್ಲ ಎಂಬಂತೆ ತೋರ್ಪಡಿಸಿಕೊಂಡರು. ‘ನೀವು ಈ ಬಡಾವಣೆಯ ನಿವಾಸಿ ಮೇಲಾಗಿ ಒಬ್ಬ ಜನಪ್ರತಿನಿಧಿ ಹೀಗಿರುವಾಗ ಲೈಸೆನ್ನನ್ನು ಎರಡು ಮಹಡಿಗೆಂದು ತೆಗೆದುಕೊಂಡು ಐದು ಮಹಡಿಗಳ ಕಟ್ಟಡಗಳನ್ನು ಕಟ್ಟಬಹುದೆ?’ ಎಂದು ಪ್ರಶ್ನಿಸಿದಾಗ ‘ಸಮೀಪದಲ್ಲೇ ಮಾಜಿ ಮೇಯರ್ ಚೆನ್ನಿ ರವಿ ಎಂಬಾತನೂ ಇದೇ ರೀತಿ ಅಕ್ರಮವಾಗಿ ಕಟ್ಟುತ್ತಿದ್ದಾರೆ ಒಡೆಯುವುದಾದರೆ ಮೊದಲು ಅವರದ್ದು ಒಡೆಯಲಿ, ಎಲ್ಲರೂ ಮಾಡೋದು ಇದೇ ರೀತೀನೆ’ ಎಂದು ಉಡಾಫೆಯ ಉತ್ತರವನ್ನು ನೀಡಿದರು.

ಹೇಳುವುದೊಂದು ಮಾಡುವುದು ಇನ್ನೊಂದು ಎಂಬಂತೆ ಮನೆ ನಿರ್ಮಿಸುವಾಗ ಅನುಮತಿ ತೆಗೆದುಕೊಳ್ಳೋದು ಒಂದು ಮಹಡಿಗೆ ಆದರೆ ಕಟ್ಟೋದು ಮಾತ್ರ ಹಲವಾರು ಮಹಡಿಗಳು. ಮೈಸೂರು ನಗರದಲ್ಲಿ ಇಂಥ ಅಕ್ರಮ ನಿರ್ಮಾಣ ಕಾರ್ಯಗಳು ಒಂದೇ ಸಮನೆ ನಡೆಯುತ್ತಿದ್ದರೂ ಸಹ ಪಾಲಿಕೆ ಅಧಿಕಾರಿಗಳು ಮಾತ್ರ ನಮಗೇನೂ ಗೊತ್ತೇ ಇಲ್ಲ ಎಂಬಂತೆ ನಿರ್ಲಕ್ಷ್ಯದಿಂದ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನಾವು ಹಿರಿಯ ಅಧಿಕಾರಿಗಳ ಆದೇಶವನ್ನು ಮಾತ್ರ ಪಾಲಿಸುತ್ತಿದ್ದೇವೆ ಎಂದು ಉದಾಸೀನದಿಂದ ಉತ್ತರವನ್ನು ಕೊಡುತ್ತಾರೆ.

ಅಕ್ರಮಗಳ ಬಗ್ಗೆ ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾನೇ ಕಟ್ಟಡ ನಿರ್ಮಾಣ ನಿಲ್ಲಿಸುವಂತೆ ಆದೇಶ ನೀಡಿದ್ದೆನಲ್ಲ ಹಾಗಿದ್ದೂ ಅದೇಗೆ ಕಟ್ಟಡ ಕಟ್ಟಿದ್ದಾರೆ ಎಂದು ಆಶ್ಚರ್‍ಯದಿಂದ ತಮಗೇನೂ ಗೊತ್ತೇ ಇಲ್ಲ ಎಂಬಂತೆ ನಾಟಕೀಯದಿಂದ ಪ್ರಶ್ನಿಸಿದವರು ನಗರಪಲಿಕೆ ವಲಯ ೬ರ ಸಹಾಯಕ ಆಯುಕ್ತೆ ಪ್ರತಿಭಾ. ಕಾಮಾಟಗೇರಿ ೨ನೇ ಕ್ರಾಸ್‌ನಲ್ಲಿ ನೆಲಮಹಡಿ ಮತ್ತು ಮೊದಲ ಮಹಡಿಗೆ ಅನುಮತಿ ತೆಗೆದುಕೊಂಡು, ಆಮೇಲೆ ಅದಕ್ಕೆ ವಿರುದ್ಧವಾಗಿ ಕಟ್ಟಡ ನಿರ್ಮಿಸುತ್ತಿರುವ ಸಂಬಂಧ ದೂರು ಕೇಳಿಬಂದಾಗ ಕೂಡಲೇ ಸ್ಥಳಕ್ಕೆ ತೆರಳಿ ನಿರ್ಮಾಣ ಕೆಲಸ ನಿಲ್ಲಿಸುವಂತೆ ಆದೇಶಿಸಿದ್ದೆ ಎಂದವರು ಸವಾಲ್ ಪತ್ರಿಕೆಗೆ ತಿಳಿಸಿದರು.

ರಾಮ ಮಂದಿರಕ್ಕೆ ಹೊಂದಿಕೊಂಡು ಕಟ್ಟಡ ನಿರ್ಮಿಸುತ್ತಿದ್ದುದನ್ನು ನೋಡಿ ನಾನೇ ನಿಲ್ಲಿಸಿದ್ದೆ ಎಂದು ಎರಡ್ಮೂರು ಬಾರಿ ಹೇಳಿದ್ದನ್ನೇ ಹೇಳಿಕೊಂಡು ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ರಾಜಕಾರಣಿಗಳ ರೀತಿ ಉತ್ತರಿಸಿದರೆ ಹೊರತು ಕಟ್ಟಡ ಕಟ್ಟುತ್ತಿರುವ ಬಗ್ಗೆ ತಮಗೆ ಗೊತ್ತೇ ಇರಲಿಲ್ಲ ಎಂಬ ಜಾಣ ಕುರುಡುತನವನ್ನು ತೋರ್ಪಡಿಸಿಕೊಂಡರು. ಇದು ಒಂದಲ್ಲ ಮೂರು ಸ್ಥಳಗಳಲ್ಲಿ ಈ ರೀತಿ ಅಕ್ರಮ ಕಟ್ಟಡ ನಿರ್ಮಾಣವಾಗಿ ಅಲ್ಲಿ ವಾಸವಾಗಿದ್ದಾರೆ ಎಂದು ಹೇಳಿದಾಗ, ಅವ್ಯವಹಾರದ ಬಗ್ಗೆ ಪ್ರಶ್ನಿಸಿದ ನಮ್ಮನೇ ಅಕ್ರಮದ ಬಗ್ಗೆ ಪೂರ್ಣ ವಿವರ ನೀಡಿ ಪರಿಶೀಲಿಸುತ್ತೇನೆ ಎಂದು ಹೇಳುವ ಮೂಲಕ ತಾವೂ ಇದರಲ್ಲಿ ಶಾಮೀಲಾಗಿದ್ದೇನೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಅಕ್ರಮ ನಿರ್ಮಾಣ ಕಾರ್ಯಗಳು ಒಂದೇ ಸಮನೆ ನಡೆಯುತ್ತಿರುವ ಬಗ್ಗೆ ಪಾಲಿಕೆ ವಲಯ ೬ರ ಸಹಾಯಕ ಇಂಜಿನಿಯರ್ ವೆಂಕಟೇಶ್‌ರವರಿಗೆ ದೂರವಾಣಿ ಮುಖೇನ ಕೇಳಿದಾಗ ನಾನೀಗ ದಸರಾ ಕೆಲಸದಲ್ಲಿದ್ದೇನೆ ಅದು ಮುಗಿದ ನಂತರ ಒಂದೆರಡು ದಿನ ಬಿಟ್ಟು ಬನ್ನಿ ಆಗ ಮಾತಾಡ್ತೇನೆ? ಎಂದು ಜಾರಿಕೊಳ್ಳುವ ರೀತಿಯಲ್ಲಿ ಸಿದ್ದ ಉತ್ತರವನ್ನು ನೀಡಿದರಷ್ಟೆ.

ಮೈಸೂರು ನಗರದಲ್ಲಿ ಅಕ್ರಮ ನಿರ್ಮಾಣ ಕಾರ್ಯಗಳ ಬಗ್ಗೆ ಅಧಿಕಾರಿಗಳು ಹೀಗೆ ಕಣ್ಣಿದ್ದೂ ಕುರುಡರಂತೆ ತಮ್ಮ (ಅ)ವಿವೇಕವನ್ನು ತೋರಿಸಿಕೊಂಡು ಹೋಗುತ್ತಿದ್ದರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಎಂಬಂತೆ ಇದನ್ನು ನಿಲ್ಲಿಸುವವರು ಯಾರು?ಅಥವಾ ಸಾಂಸ್ಕೃತಿಕ ನಗರಿ ಮೈಸೂರು ಅಕ್ರಮ ಕಟ್ಟಡಗಳ ನಗರ ಎಂಬ ಖ್ಯಾತಿಗೆ ಒಳಗಾಗಬೇಕೆ? ಇನ್ನಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಕಟ್ಟಡವನ್ನು ಕೆಡವಿ ಎತ್ತರದ ಕಟ್ಟಡದಿಂದ ಆಗಬಹುದಾದ ಅನಾಹುತಗಳನ್ನು ತಡೆಯಲ್ಲಿ ಎಂಬುದು ಸಾರ್ವಜನಿಕರ ಆಶಯ.