ಬೆಂಗಳೂರು: ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ? ಎಂದು ಕೇಳಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. “ನನ್ನ ಮೇಲಿನ ಪ್ರಕರಣಗಳಿಗೂ ನಿಮ್ಮ ಹಗರಣಕ್ಕೂ ವ್ಯತ್ಯಾಸವಿದೆ” ಎಂದಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಮೇಲಿನ ಆರೋಪಗಳ ಮಾತು ಆಮೇಲೆ. ನಿಮ್ಮ ವಿರುದ್ಧ ಹೈಕೋರ್ಟ್, ಜನಪ್ರತಿನಿಧಿಗಳ ನ್ಯಾಯಾಲಯಗಳಿಂದ ಆದೇಶಗಳು ಬಂದಿವೆ. ಅದಕ್ಕೇನು ಹೇಳುತ್ತೀರಿ?. ಹೈಕೋರ್ಟ್ನಲ್ಲಿ ವಾದ ಮಾಡುವಾಗ ವಕೀಲರು ಮುಡಾ ಹಗರಣದ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನ್ಯಾಯಾಲಯಗಳ ಆದೇಶವೂ ಬಂದಿದೆ. ಹೇಳಿಕೊಳ್ಳುವುದಕ್ಕೆ ನಿಮಗೇನಿದೆ ಎಂದು ಪ್ರಶ್ನಿಸಿದರು.
“ಕುಮಾರಸ್ವಾಮಿ ಸರ್ಕಾರಿ ಭೂಮಿ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಬಗ್ಗೆಯೂ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೇನೆ. ಅರ್ಜಿ ಹಾಕದಿರುವ ಕಂಪನಿಗೆ ಗಣಿ ಗುತ್ತಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಅವರು ಅರ್ಜಿ ಹಾಕಿದ್ದಾರೆ, ಆದರೆ ಅವರಿಗೆ ಗಣಿ ಗುತ್ತಿಗೆ ನೀಡಿಲ್ಲ. ರಾಜ್ಯ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. ಹೀಗಿದ್ದ ಮೇಲೆ ಅದು ಹಗರಣ ಹೇಗೆ ಆಗುತ್ತದೆ?. ರಾಜ್ಯ ಸರ್ಕಾರ 2009ರಲ್ಲೇ ಭೂಮಿ ಯಾರಿಗೂ ಕೊಟ್ಟಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಯಾರೋ ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಕುಮಾರಸ್ವಾಮಿ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದರು.
“ಜಂತಕಲ್ ಮೈನಿಂಗ್ ವಿಚಾರದಲ್ಲಿ ಆಗಿನ ಸಿಎಂ ಆದೇಶ ಮಿಸ್ ಕಂಡಕ್ಟ್ ಆಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ನ್ಯಾ.ಸಂತೋಷ ಹೆಗಡೆ ಅವರು ಹಾಗೆಂದು ಉಲ್ಲೇಖಿಸಿದ್ದಾರೆ. ಅದರ ಹೊರತಾಗಿ ಹಣಕ್ಕಾಗಿ ಅಥವಾ ಭೂಮಿಗಾಗಿ, ಲಾಭಕ್ಕಾಗಿ ಮಾಡಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಸಾಯಿ ವೆಂಕಟೇಶ್ವರ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ 2012ರಿಂದ ಇದೆ. ಮುಡಾ ಹಗರಣ ಬಗ್ಗೆ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೋರ್ಟ್ ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಹಲವಾರು ಕಾನೂನು ತಜ್ಞರು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಆದೇಶದ ಬಗ್ಗೆ ಮಾಧ್ಯಮಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸುದ್ದಿ ಪ್ರಸಾರವಾಗಿದೆ. ಆದರೆ, ಸಿಎಂ ಸಾಹೇಬರಿಗೆ ಕೋರ್ಟ್ ಆದೇಶದ ಪ್ರತಿಯೇ ಸಿಕ್ಕಿಲ್ಲವಂತೆ. ನಿಮ್ಮ ವಿರುದ್ಧ ಬಂದಿರುವ ಆದೇಶದ ಬಗ್ಗೆ ಮಾತನಾಡಿ ಎಂದರೆ, ಜೆಡಿಎಸ್, ಬಿಜೆಪಿ ಒಳಸಂಚು ಮಾಡಿವೆ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕೇಳುತ್ತಾರೆ ಸಿದ್ದರಾಮಯ್ಯನವರು. ಇದು ನಮ್ಮ ಸಿಎಂ ವರಸೆ” ಎಂದು ಲೇವಡಿ ಮಾಡಿದರು.
“ನನ್ನ ರಾಜಿನಾಮೆಯನ್ನು ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ರಾಜಿನಾಮೆ ಕೇಳಿದ್ದಾರೆ. ನನ್ನ ಮೇಲಿನ ಆರೋಪ ಮುಕ್ತವಾದ ಮೇಲೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದೇನೆ. ಹಿಂದೆ ಇದೇ ಸಿದ್ದರಾಮಯ್ಯ ಐದು ವರ್ಷಗಳ ಸರ್ಕಾರ ಮಾಡಿದ್ದಾಗ ದಿನವೂ ಇಂಥವೇ ಅಕ್ರಮಗಳನ್ನು ನಡೆಸಿದ್ದರು. ಅದನ್ನು ದಿನವೂ ನಾನು ಪ್ರಶ್ನೆ ಮಾಡುತ್ತಿದ್ದೆ. ಇವನೊಬ್ಬನಿಂದ ನನಗೆ ಮುಜುಗರ ಇಲ್ಲದೆ ಆಡಳಿತ ನಡೆಸೋಕೆ ಆಗುತ್ತಿಲ್ಲ, ಇವನನ್ನು ಮಟ್ಟ ಹಾಕಿದರೆ ನನಗೆ ಅಡ್ಡ ಯಾರೂ ಇರುವುದಿಲ್ಲ ಎಂದು ಅವತ್ತೇ ನನ್ನ ವಿರುದ್ಧ ಕುತಂತ್ರ ಮಾಡಿದ್ದರು. ಜನರ ಪರವಾಗಿ ಹೋರಾಟ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಇವತ್ತು ಇದೆಲ್ಲಾ ಎದುರಿಸಬೇಕಿದೆ. ಧೈರ್ಯವಾಗಿ ಎದುರಿಸುತ್ತೇನೆ” ಎಂದು ಸವಾಲು ಹಾಕಿದರು.
“ಹೆದರಿಸಿ ಕುಮಾರಸ್ವಾಮಿ ಬಾಯಿ ಮುಚ್ಚಿಸಿಸಬಹುದು ಎಂದು ಕಾಂಗ್ರೆಸ್ ಅವರು ಭಾರಿ ಸಂಚು ಮಾಡಿದ್ದರು. ಆದರೂ ಇವರಿಗೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಾಯಿತಾ? ಯಾರಿಂದಲೂ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಡಿನೋಟಿಫಿಕೇಶನ್ ವಿಚಾರಕ್ಕೆ ಬರುವುದಾದರೆ, ರಾಜಶೇಖರಯ್ಯ ಅನಾಮಿಕ ಎಂದು ಸಚಿವರು ಹೇಳಿದ್ದಾರೆ. 2007ರ ವಿಳಾಸವನ್ನು ಈಗ ಹುಡುಕಿಕೊಂಡು ಹೋದರೆ ಏನು ಪ್ರಯೋಜನ? ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಹುಡುಕಿಕೊಂಡು ಯಾಕೆ ಹೋಗಲಿಲ್ಲ? ಇವರು ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ನೈತಿಕತೆಯನ್ನು ಸಾಬೀತು ಮಾಡಿ ಉತ್ತರ ಕೊಡುತ್ತೇನೆ” ಎಂದು ತಿಳಿಸಿದರು.
“ಗಂಗೇನಹಳ್ಳಿ ಭೂಮಿ ಸರ್ಕಾರಿ ಭೂಮಿ ಎಂದು ಸುಳ್ಳು ಹೇಳಿದ್ದಾರೆ. ಸ್ವಾಧೀನ ಮಾಡಿಕೊಂಡ ಭೂಮಿಗೆ ಬಿಡಿಎ ಪರಿಹಾರ ನೀಡಿದ್ದಾರೆಯೇ? ಅಲ್ಲಿ ಬಡಾವಣೆ ಮಾಡಲಾಗಿದೆಯೇ? ಯಾರಿಗಾದರೂ ನಿವೇಶನ ಹಂಚಿಕೆ ಆಗಿದೆಯಾ? 1975-76ರಲ್ಲಿ ಅದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 2007ವರೆಗೂ ಸ್ವಾಧೀನ ಮಾಡಿಕೊಂಡಿದ್ದ ಜಾಗದಲ್ಲಿ ನಿವೇಶನ ಮಾಡಿ ಹಂಚಿಲ್ಲ? ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಐದು ವರ್ಷದಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ ಆ ಭೂಮಿಯನ್ನು ಮರಳಿ ರೈತರಿಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
“ನನ್ನ ಬಾವಮೈದ ಆ ಜಾಗವನ್ನು ಖರೀದಿ ಮಾಡಿದ್ದಾನೆ. ಡಿನೋಟಿಫಿಕೇಶನ್ ಆದ ಜಾಗವನ್ನು ಮಾರಾಟ ಮಾಡಬಾರದು ಎಂದು ಕಾನೂನಿನಲ್ಲಿ ಇದೆಯಾ? ಸಿದ್ದರಾಮಯ್ಯ ಅವರಿಗೂ ಅದೇ ಹೇಳಿದ್ದೇನೆ, ಕಾನೂನು ವ್ಯಾಪ್ತಿಯಲ್ಲಿ ಹದಿನೈದು ಅಲ್ಲದಿದ್ದರೆ ಐವತ್ತು ನಿವೇಶನ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಾನು ಪಲಾಯನ ಮಾಡುವ ಪೈಕಿ ಅಲ್ಲ. ನಾನು ಯಾವ ಪ್ರಭಾವ ಬಳಸಲ್ಲ. ಯಾರ ನೆರವೂ ಪಡೆಯಲ್ಲ ಎಂದ ಹೆಚ್ಡಿಕೆ ಕರ್ನಾಟಕದಲ್ಲಿ ಇರುವುದು ದರೋಡೆಕೋರರ ಸರ್ಕಾರ. ಅವರು ಹಿಂದೆಯೂ ದರೋಡೆ ಮಾಡುತ್ತಿದ್ದರು, ಈಗಲೂ ಮಾಡುತ್ತಿದ್ದಾರೆ” ಎಂದು ದೂರಿದರು.