ಮನೆ ರಾಜ್ಯ ರಾಜ್ಯಪಾಲರಿಗೆ ಮತ್ತೆ ಸಡ್ಡು: ಸಿಬಿಐ ತನಿಖೆಗೂ ನಿರ್ಬಂಧ- ಸಚಿವ ಸಂಪುಟ ನಿರ್ಧಾರ

ರಾಜ್ಯಪಾಲರಿಗೆ ಮತ್ತೆ ಸಡ್ಡು: ಸಿಬಿಐ ತನಿಖೆಗೂ ನಿರ್ಬಂಧ- ಸಚಿವ ಸಂಪುಟ ನಿರ್ಧಾರ

0

ಬೆಂಗಳೂರು: ವಿವರಣೆ, ಮಾಹಿತಿ ಕೇಳಿ ರಾಜ್ಯಪಾಲರಿಂದ ಬರುವ ಯಾವುದೇ ಪತ್ರಕ್ಕೂ ಮುಖ್ಯ ಕಾರ್ಯದರ್ಶಿ ಸೇರಿದಂತೆ ಯಾವುದೇ ಅಧಿಕಾರಿ ನೇರ ಉತ್ತರ ಕೊಡುವಂತಿಲ್ಲ ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ.

Join Our Whatsapp Group

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಖಾಸಗಿ ವ್ಯಕ್ತಿಗಳು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ವಿವರಣೆ ಕೇಳುವ ನೋಟಿಸ್ ಜಾರಿ ಮಾಡಿದ್ದರು. ಆ ಬಳಿಕ, ರಾಜಭವನ ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಶುರುವಾಗಿತ್ತು. ‘ಲೋಕಾಯುಕ್ತವು ಪ್ರಕರಣ ದಾಖಲಿಸಲು ಅನುಮತಿ ಕೋರಿದ ಪ್ರಕರಣಗಳೆಷ್ಟು? ಲೋಕಾಯುಕ್ತದ ಮಾಹಿತಿ ಸೋರಿಕೆಯಾಗಿದ್ದು ಹೇಗೆ’ ಎಂಬ ಬಗ್ಗೆ ವಿವರಣೆ ಕೇಳಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು. ಇದು ಎರಡು ಶಕ್ತಿಕೇಂದ್ರಗಳ ಮಧ್ಯದ ಸಂಘರ್ಷ ತೀವ್ರಗೊಳ್ಳುವ ಸೂಚನೆಗಳನ್ನು ನೀಡಿತ್ತು.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ರಾಜಭವನದ ಸರಣಿ ಪತ್ರ’ ಕುರಿತು ಚರ್ಚೆ ನಡೆಯಿತು. ‘ರಾಜಭವನದಿಂದ ಬರುವ ಪತ್ರಗಳ ವಿಷಯಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕು. ಅಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನಷ್ಟೇ ರಾಜ್ಯಪಾಲರಿಗೆ ಉತ್ತರವಾಗಿ ನೀಡಬೇಕು‌’ ಎಂಬ ನಿರ್ಣಯವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಅವರು ಈ ಕುರಿತು ವಿವರ ನೀಡಿದರು.

ಪತ್ರ ಬರೆದು ನಾಳೆಯೇ ಉತ್ತರ ಕೊಡಿ, ನಾಳಿದ್ದು ಕೊಡಿ ಎನ್ನುತ್ತಿದ್ದಾರೆ. ಇವೆಲ್ಲವನ್ನು ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಇಲ್ಲಿಯವರೆಗೆ ರಾಜ್ಯಪಾಲರಿಂದ ಬರುತ್ತಿದ್ದ ಪತ್ರಗಳಿಗೆ ಮುಖ್ಯಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ನೇರವಾಗಿ ಉತ್ತರಿಸುತ್ತಿದ್ದರು. ಇನ್ನು ಮುಂದೆ ಅಧಿಕಾರಿಗಳು ನೇರವಾಗಿ ಉತ್ತರಿಸುವಂತಿಲ್ಲ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಅವರ ವಿರುದ್ಧದ ಪ್ರಕರಣಗಳಿಗೆ ಅಭಿಯೋಜನೆ ನೀಡುವುದಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಮಾಹಿತಿ ಸೋರಿಕೆ ಮಾಡಿದ್ದು ಯಾರು ಎಂದು ರಾಜ್ಯಪಾಲರು ಪ್ರಶ್ನಿಸಿದ್ದರು. ಅಲ್ಲದೇ, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ತನಿಖೆ ನಡೆಸುವಂತೆಯೂ ಸೂಚಿಸಿದ್ದರು’ ಎಂದು ಹೇಳಿದರು.

ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ದಳದ ಪೊಲೀಸ್ ಮಹಾ ನಿರ್ದೇಶಕರು ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ, ಅಭಿಯೋಜನೆಗೆ ಕೋರಿ ಸಲ್ಲಿಕೆಯಾಗಿದ್ದ ಕಾಗದ ಪತ್ರಗಳು ಎಂಟು ತಿಂಗಳವರೆಗೆ ರಾಜಭವನದ ವಶದಲ್ಲೇ ಇವೆ. ಆ ರೀತಿ ಕಾಗದ ಪತ್ರಗಳನ್ನು ಉಳಿಸಿಕೊಳ್ಳುವುದು ಭ್ರಷ್ಟಾಚಾರ ಕಾಯ್ದೆಯ ಉಲ್ಲಂಘನೆ. ರಾಜಭವನದಿಂದಲೇ ಕಾಯ್ದೆಯ ಉಲ್ಲಂಘನೆ ಆಗಿದೆ ಎಂದು ಹೇಳಿದರು.

ಈ ಮಾಹಿತಿ ಮಾಧ್ಯಮವೊಂದಕ್ಕೆ ಸೋರಿಕೆ ಆಗಿದ್ದೇ ರಾಜಭವನದಿಂದ ಎಂಬುದು ತನಿಖೆಯಿಂದ ಗೊತ್ತಾಗಿದೆ. ರಾಜಭವನದ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆ ಆಗಿದೆ ಮತ್ತು ದಾಖಲೆ ಬಹಿರಂಗಗೊಂಡಿವೆ ಎಂಬ ಬಗ್ಗೆ ಇನ್ನಷ್ಟು ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಪೊಲೀಸ್ ಮಹಾ ನಿರ್ದೇಶಕರು ಕೋರಿದ್ದಾರೆ ಎಂದು ಅವರು ವಿವರಿಸಿದರು.

ರಾಜ್ಯಪಾಲರು ಮೇಲಿಂದ ಮೇಲೆ ಸರ್ಕಾರವೇ ಮಾಹಿತಿ ಸೋರಿಕೆ ಮಾಡಿದ್ದು ಎಂಬಂತೆ ಹೇಳಿದ್ದಾರೆ. ಕಾನೂನುಬಾಹಿರವಾಗಿ ಕಾಗದ ಪತ್ರಗಳನ್ನು ಇಟ್ಟುಕೊಂಡಿದ್ದು ಅಲ್ಲದೇ, ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಿಬಿಐ ತನಿಖೆಗೂ ನಿರ್ಬಂಧ

‘ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗಿದ್ದು ಇನ್ನುಮುಂದೆ ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕಾದರೂ ಸಿಬಿಐ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಿಬಿಐ ಪೂರ್ವಗ್ರಹದಿಂದ ಕಾರ್ಯನಿರ್ವಹಿಸುತ್ತಿರುವುದು ದೃಢಪಟ್ಟಿದೆ. ಆದ್ದರಿಂದ ಸಿಬಿಐಗೆ ಮುಕ್ತ ಅವಕಾಶ ನೀಡಬಾರದು ಎಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು. ‘ಮುಖ್ಯಮಂತ್ರಿ ವಿರುದ್ಧದ ಮುಡಾ ಪ್ರಕರಣಕ್ಕೂ ಈ ತೀರ್ಮಾನಕ್ಕೂ ಯಾವುದೇ ಸಂಬಂಧವಿಲ್ಲ. ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತವೇ ನಡೆಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿಬಿಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು. ಒಂದು ವೇಳೆ ನ್ಯಾಯಾಲಯವು ಸಿಬಿಐ ತನಿಖೆಗೆ ಸೂಚಿಸಿದರೆ ಆಗ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದು ಎಂದು ಪಾಟೀಲ ಹೇಳಿದರು.

ರಾಜಭವನದ ಅಧಿಕಾರಿಗಳ ವಿಚಾರಣೆ ಅನುಮತಿ ಕೋರಿಕೆ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿದ್ದ ಕಡತಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆ ಕುರಿತು ರಾಜಭವನ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ. ಚಂದ್ರಶೇಖರ್‌ ಅವರು ತನಿಖಾ ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಮಾಹಿತಿ ಸೋರಿಕೆ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲರು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಆಗಸ್ಟ್ 20ರಂದು ಪತ್ರ ಬರೆದಿದ್ದರು. ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ಬಳಿಕ ಸೆಪ್ಟೆಂಬರ್‌ 4ರಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖರ್ಬೀಕರ್‌ ಅವರಿಗೆ ಪತ್ರ ಬರೆದಿರುವ ಚಂದ್ರಶೇಖರ್‌, ರಾಜಭವನದ ಸಚಿವಾಲಯದಲ್ಲಿ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತದ ವಿಶೇಷ ತನಿಖಾ ತಂಡವು, ಕುಮಾರಸ್ವಾಮಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ 2023 ಸೆಪ್ಟೆಂಬರ್‌ 24ರಂದು ಮುಚ್ಚಿದ ಲಕೋಟೆಯಲ್ಲಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು. ಎಂಟು ತಿಂಗಳಿನಿಂದ ಕಡತ ರಾಜ್ಯಪಾಲರ ಸಚಿವಾಲಯದಲ್ಲೇ ಬಾಕಿ ಇತ್ತು. ಈ ಕುರಿತ ಮಾಹಿತಿ ಆ.7ರಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಮಾಹಿತಿ ಸೋರಿಕೆಯಲ್ಲಿ ಎಸ್‌ಐಟಿ ಪಾತ್ರ ಇಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಎಸ್‌ಐಟಿ ಮುಖ್ಯಸ್ಥರೂ ಆಗಿರುವ ಐಜಿಪಿ ಪತ್ರದಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 19ರ ಪ್ರಕಾರ, ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿದ ಪ್ರಸ್ತಾ ವಗಳನ್ನು ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡಬೇಕಿದೆ. ರಾಜ್ಯಪಾಲರ ಸಚಿ ವಾಲಯವು ಕಡತವನ್ನು ಎಂಟು ತಿಂಗಳಿಗೂ ಹೆಚ್ಚು ಬಾಕಿ ಇರಿಸಿಕೊಂಡಿದ್ದು ಕಾಯ್ದೆಯ ಉಲ್ಲಂಘನೆ. ಅಲ್ಲಿ ಇದ್ದ ಕಡತದ ಮಾಹಿತಿ ಹೇಗೆ ಸೋರಿಕೆ ಆಗಿದೆ ಎಂಬುದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ.