ಮನೆ ಕಾನೂನು ಪತ್ನಿ ಜೊತೆ ಒಪ್ಪಂದ ಮಾಡಿಕೊಂಡು ಜೀವನಾಂಶ ಪಾವತಿಸುವ ಹೊಣೆಯಿಂದ ಪತಿ ನುಣುಚಿಕೊಳ್ಳಲಾಗದು: ಗುವಾಹಟಿ ಹೈಕೋರ್ಟ್

ಪತ್ನಿ ಜೊತೆ ಒಪ್ಪಂದ ಮಾಡಿಕೊಂಡು ಜೀವನಾಂಶ ಪಾವತಿಸುವ ಹೊಣೆಯಿಂದ ಪತಿ ನುಣುಚಿಕೊಳ್ಳಲಾಗದು: ಗುವಾಹಟಿ ಹೈಕೋರ್ಟ್

0

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಗಂಡನಿಂದ ಜೀವನಾಂಶ ಪಡೆಯುವುದು ಪತ್ನಿಯ ಶಾಸನಬದ್ಧ ಹಕ್ಕಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪತಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಅಂತಹ ಒಪ್ಪಂದ ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದು, ಅನೂರ್ಜಿತವಾಗುತ್ತದೆ ಎಂದಿರುವ ನ್ಯಾಯಾಲಯ “ಹೆಂಡತಿಗೆ ಜೀವನಾಂಶ ನೀಡಬೇಕಾದ ಶಾಸನಬದ್ಧ ಹಕ್ಕನ್ನು ಪತಿ ಅದಕ್ಕೆ ವ್ಯತಿರಿಕ್ತವಾದ ಒಪ್ಪಂದ ಏರ್ಪಡಿಸುವ ಮೂಲಕ ಬದಲಿಸಲು ಇಲ್ಲವೇ ತೆಗೆದುಹಾಕಲು ಸಾಧ್ಯವಿಲ್ಲ. ಸಾರ್ವಜನಿಕ ನೀತಿಗೆ ವಿರುದ್ಧವಾಗಿ ಹೆಂಡತಿ ಜೀವನಾಂಶ ಪಡೆಯುವ ಹಕ್ಕನ್ನು ಒಪ್ಪಂದದ ಮೂಲಕ ತೊರೆಯುವುದು ಅನೂರ್ಜಿತವಾಗುತ್ತದೆ” ಎಂದು ನ್ಯಾ. ರೂಮಿ ಕುಮಾರ್‌ ಪುಕನ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

ರಂಜಿತ್‌ ಕೌರ್‌ ಮತ್ತು ಪವಿತ್ತರ್‌ ಸಿಂಗ್‌ ನಡುವಣ ಪ್ರಕರಣದಲ್ಲಿ ರಾಷ್ಟ್ರೀಯತೆ, ಜಾತಿ, ಅಥವಾ ಪಂಥವನ್ನು ಲೆಕ್ಕಿಸದೆ ಶಾಸಕಾಂಗ ರೂಪಿಸಿದ ಜೀವನಾಂಶ ಎಂಬುದು ಶಾಸನಬದ್ಧ ಹಕ್ಕು ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

ತವರು ಮನೆಯಲ್ಲಿ ಇರುವವರೆಗೂ ತನ್ನ ಖರ್ಚನ್ನು ತನ್ನ ತಂದೆ ತಾಯಿಗಳೇ ನೋಡಿಕೊಳ್ಳುತ್ತಾರೆ ಎಂದು ಗಂಡನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಪತ್ನಿಗೆ ಜೀವನಾಂಶ ನೀಡಲಾಗದು ಎಂಬುದಾಗಿ ಕೆಳ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಇದನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ವೇಳೆ ಕೆಳ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿದ ಪೀಠ, ಪ್ರಕರಣವನ್ನು ಹೊಸತಾಗಿ ವಿಚಾರಣೆ ನಡೆಸುವಂತೆ ಅದಕ್ಕೆ ಸೂಚಿಸಿತು.