ಹೈದರಾಬಾದ್: ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಮನೆ ಮೇಲೆ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಸರ್ಕಾರದ ಉನ್ನತ ಸ್ಥಾನದಲ್ಲಿರುವ ಮಂತ್ರಿಗಳ ಮನೆಯಲ್ಲೇ ಕಳ್ಳತನ ನಡೆದಿರುವುದು ಇದೀಗ ಸಂಚಲನ ಮೂಡಿಸಿದೆ. ಅಪಾರ ಪ್ರಮಾಣದ ನಗನಗದು ಕಳ್ಳರ ಪಾಲಾಗಿದೆ ಎಂದು ಹೇಳಲಾಗಿದೆ.
ಗುರುವಾರ ಬಂಜಾರ ಹಿಲ್ಸ್ ರಸ್ತೆ ಸಂಖ್ಯೆ 14ರಲ್ಲಿರುವ ಉಪಮುಖ್ಯಮಂತ್ರಿಗಳ ಮನೆಯಲ್ಲಿ ಕಳ್ಳತನ ನಡೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ತಂಡ ರಚಿಸಿ ತನಿಖೆ ನಡೆಸಿದ ವೇಳೆ ಕಳ್ಳರು ಪಶ್ಚಿಮ ಬಂಗಾಳದಲ್ಲಿ ಇರುವುದು ಪತ್ತೆಯಾಗಿದೆ. ಕೂಡಲೇ ಬಂಗಾಳದ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು ಕಾರ್ಯಪ್ರವೃತ್ತರಾದ ಪೊಲೀಸರು ಖರಗ್‌ಪುರ ರೈಲು ನಿಲ್ದಾಣದಲ್ಲಿ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ರೋಷನ್ ಕುಮಾರ್ ಮಂಡಲ್ ಮತ್ತು ಉದಯ್ ಕುಮಾರ್ ಠಾಕೂರ್ ಎಂದು ಗುರುತಿಸಲಾಗಿದೆ. ಇವರಿಂದ ರೂ. 2.2 ಲಕ್ಷ ನಗದು, 100 ಗ್ರಾಂ ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.