ಮನೆ ಸ್ಥಳೀಯ 5 ನೇ ದಿನದಲ್ಲೂ ಮುಂದುವರೆದ ಯುವಸಂಭ್ರಮದ ಆರ್ಭಟ

5 ನೇ ದಿನದಲ್ಲೂ ಮುಂದುವರೆದ ಯುವಸಂಭ್ರಮದ ಆರ್ಭಟ

0

ಮೈಸೂರು: ದಸರಾ ಮಹೋತ್ಸವದ ಬಹುದೊಡ್ಡ ಆಕರ್ಷಣೆಯಾಗಿರುವ ಯುವಸಂಭ್ರಮವು 5 ನೇ ದಿನದಲ್ಲಿಯೂ ತನ್ನ ಆರ್ಭಟವನ್ನು ಮುಂದುವರೆಸಿದ್ದು, ವಯಸ್ಸಿನ ಮಿತಿಯಿಲ್ಲದೆ ಮಕ್ಕಳಿಂದ ವೃದ್ಧರವರೆಗೂ ಬೇರೆ ಬೇರೆ ಸ್ಥಳಗಳಿಂದ ಸಾವಿರಾರು ಜನರು ಆಗಮಿಸಿ ಸಂಭ್ರಮದ ವೈಭವವನ್ನು ಕಣ್ತುಂಬಿಕೊಂಡರು.

Join Our Whatsapp Group

ಕಾರ್ಯಕ್ರಮದ ಶುರುವಿಗೂ ಮುನ್ನ ನಿಶ್ಯಬ್ದದಿಂದ ಕೂಡಿದ್ದ ಮಾನಸ ಗಂಗೋತ್ರಿಯ ಬಯಲು  ರಂಗಮಂದಿರ, ವೇದಿಕೆಯ ಮೇಲೆ ವಿದ್ಯಾರ್ಥಿಗಳು ಪ್ರದರ್ಶನ ನೀಡಲು ಆರಂಭಿಸುತ್ತಿದ್ದಂತೆಯೇ ಜನರ ಆರ್ಭಟಕ್ಕೆ ಮಿತಿಯೇ ಇರಲಿಲ್ಲ. ಪ್ರತಿಯೊಂದು ನೃತ್ಯ ಪ್ರದರ್ಶನಕ್ಕೂ ಬೆಂಬಲ ಪ್ರೋತ್ಸಾಹವನ್ನು ನೀಡಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಹುಮ್ಮಸ್ಸನ್ನು ತುಂಬುತ್ತಿದ್ದರು.

ಜೊತೆಗೆ ತಮ್ಮ ನೆಚ್ಚಿನ ಹಾಡು ಬಂದಾಗ  ವಿದ್ಯಾರ್ಥಿಗಳೊಂದಿಗೆ ಕುಣಿದವರ ಸಂಖ್ಯೆ ಹೆಚ್ಚುತ್ತಿತ್ತು.

ಬೆಂಗಳೂರಿನ ಅರುಣೋದಯ ಕಾಲೇಜಿನವರ ರೈತ ಪ್ರಧಾನ ಪ್ರದರ್ಶನಕ್ಕೆ ಜನರು ಶಿಳ್ಳೆ ಚಪ್ಪಾಳೆ ಹೊಡೆದರೆ, ಮೈಸೂರಿನ ಎಂ ಐ ಟಿ ಕಾಲೇಜಿನ ಮಹಾದೇವನ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಮಾರುಹೋದರು. ಲಕ್ಷ್ಮೀ ವೈಷ್ಣವ ಕಾಲೇಜಿನ ವಿದ್ಯಾರ್ಥಿಗಳು ಪ್ರಕ್ಷಕರ ಮುಂದೆ  ರಾಮಾಯಣವನ್ನು ಮರು ಸೃಷ್ಟಿ ಮಾಡಿದರೆ, ಹೊಳೆನರಸೀಪುರ ದ ಕಾಲೇಜು ವಿದ್ಯಾರ್ಥಿಗಳು  ಕರಾಟೆ ಕಿಂಗ್ ಶಂಕರ್ ನಾಗ್ ಅವರ ನೆನಪನ್ನು ವೇದಿಕೆಗೆ ಕರೆತರುವುದರ ಮೂಲಕ ಯುವಜನರನ್ನು ರೋಮಾಂಚನಗೊಳಿಸಿದರು.

 ಮಹಿಳಾ ಸ್ವತಂತ್ರ ವಿಷಯದ ಮೇಲೆ ಮಾಡಿದ ನೃತ್ಯವನ್ನು  ಕಣ್ತುಂಬಿಕೊಂಡ ಜನತೆ, ಎಚ್. ಡಿ ದೇವಗೌಡ ಕಾಲೇಜು ವಿದ್ಯಾರ್ಥಿಗಳ ಭಕ್ತಿ ಪ್ರಧಾನ ಪ್ರದರ್ಶನಕ್ಕೆ ಬಯಲು ರಂಗಮಂದಿರವೇ ಬೆರಗಾಯಿತು. ಇನ್ನೂ ಕಾಲೇಜಿನ ಹುಲಿಕುಣಿತ ಹಾಗೂ ಭರತನಾಟ್ಯಕ್ಕೆ ಚಪ್ಪಾಳೆಯ ಸುರಿಮಳೆಯೇ ಬಂದಿತು. ನಿರ್ಮಲಾ ಕಾಲೇಜು ವಿದ್ಯಾರ್ಥಿಗಳ ಕನ್ನಡ ಪ್ರೇಮದ ಪ್ರದರ್ಶನವು ಎಲ್ಲಾ ಕನ್ನಡಿಗರ ಮನಮುಟ್ಟಿತು. ಮೈಸೂರಿನ ಮಹಾರಾಜ ಕಾಲೇಜಿನ ಜೈ ಭೀಮ್ ಪ್ರದರ್ಶನವು ಜನರ ಘೋಷಣೆಗೆ ಪಾತ್ರವಾಯಿತು.

ಒಟ್ಟಾರೆಯಾಗಿ 5 ನೇ ದಿನದಂದು 56 ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರದರ್ಶನವನ್ನು ನೀಡಿ, ಪ್ರತಿಯೊಂದು ತಂಡವು ಯುವಸಂಭ್ರಮಕ್ಕೆ ಆಗಮಿಸಿದ್ದಂತಹ ಪ್ರೇಕ್ಷಕರ ಮೆಚ್ಚಿಗೆಯನ್ನು ಪಡೆದುಕೊಂಡರು.