ಮನೆ ರಾಜ್ಯ ದಸರಾ ದೀಪಾಲಂಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ

ದಸರಾ ದೀಪಾಲಂಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ

0

ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಚಾಲನೆ ನೀಡಿದರು.

Join Our Whatsapp Group

ನಗರದ ಸಯ್ಯಾಜಿರಾವ್‌ ರಸ್ತೆಯಲ್ಲಿನ ಹಸಿರು ಚಪ್ಪರದ ಆವರಣದಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಸರಾ ವಿದ್ಯುತ್‌ ದೀಪಾಲಂಕಾರಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು.

“ಪವರ್‌ ಮ್ಯಾನ್‌”ಗಳ ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ರೂಪಿಸಲಾಗಿರುವ ವಿದ್ಯುತ್‌ ರಥ ಕ್ಕೂ ಚಾಲನೆ ನೀಡಲಾಯಿತು.

 ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸೆಸ್ಕ್‌)ದಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು,  ಹಿಂದಿನ ವರ್ಷಗಳಿಗಿಂತ ಈ ಬಾರಿಯ  ದೀಪಾಲಂಕಾರ ಇನ್ನಷ್ಟು ಆಕರ್ಷಕ ವಾಗಿದೆ.

130 ಕಿಮೀ ರಸ್ತೆಗೆ ದೀಪಾಲಂಕಾರ:

ಈ ಬಾರಿ ಮೈಸೂರು ನಗರದ 130 ಕಿ.ಮೀ ವ್ಯಾಪ್ತಿಯ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್‌ ರಸ್ತೆ, ಬಿಎನ್‌ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್‌ ವಿಕ್ಟರ್‌ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ನಗರದ ದೊಡ್ಡಕೆರೆ ಮೈದಾನ, ಕೆ.ಆರ್‌.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್‌), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್‌, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್‌ ದೀಪಗಳಿಂದಲೇ 65ಕ್ಕೂ ಹೆಚ್ಚು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

“ಇತ್ತೀಚಿನ ದಿನಗಳಲ್ಲಿ ಸೆಸ್ಕ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗಮದ ಎಲ್ಲ ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಗೃಹಜ್ಯೋತಿ ಸೇರಿದಂತೆ ಎಲ್ಲ ಭಾಗ್ಯಗಳು ಇದೇ ರೀತಿ ಮುಂದುವರಿಯಲಿದೆ. ಈ ಬಾರಿ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗಿದೆ”.

ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ.

21 ದಿನಗಳ ಆಕರ್ಷಣೆ:

ದಸರಾ ಹಿನ್ನೆಲೆಯಲ್ಲಿ ಮಾಡಲಾಗಿರುವ ವಿದ್ಯುತ್‌ ದೀಪಾಲಂಕಾರ ಈ ಬಾರಿ ಒಟ್ಟು 21 ದಿನಗಳ ಕಾಲ ನಡೆಯಲಿದೆ. ದಸರಾ ದೀಪಾಲಂಕಾರಕ್ಕೆ 6.50 ಕೋಟಿ ರೂ. ವೆಚ್ಚವಾಗುತ್ತಿದ್ದು, 2881 ಕಿ.ವ್ಯಾ ಅಂದಾಜು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಭಾರ ಹಾಗೂ 242012 ಯೂನಿಟ್‌ಗಳ ವಿದ್ಯುತ್‌ ಬಳಕೆ ಮಾಡಲಾಗುತ್ತಿದೆ.

ಡ್ರೋನ್‌ ಶೋ ಮೆರಗು:

“ದಸರಾ ದೀಪಾಲಂಕಾರದೊಂದಿಗೆ ಮೊದಲ ಬಾರಿಗೆ ಡ್ರೋನ್‌ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್.ಇ.ಡಿ. ಬಲ್ಪ್‌ಗಳನ್ನು ಅಳವಡಿಸಿರುವ ಸುಮಾರು 1500 ಡೋನ್‌ಗಳನ್ನು ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸಲಾಗುವುದು. ಅಕ್ಟೋಬರ್‌ 6, 7ರಂದು ಹಾಗೂ 11, 12ರಂದು ರಾತ್ರಿ 8 ಗಂಟೆಯಿಂದ 8:15ರವರೆಗೆ ಡ್ರೋನ್‌ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ.6 ಮತ್ತು 7ರಂದು ಡ್ರೋನ್‌ ಶೋ ವೀಕ್ಷಿಸಲು ಉಚಿತ ಪ್ರವೇಶವಿರುತ್ತದೆ. 

ವಿದ್ಯುತ್‌ ರಥ ಸಂಚಾರ:

ದಸರಾ ಸಂದರ್ಭದಲ್ಲಿ “ಪವರ್‌ ಮ್ಯಾನ್‌”ಗಳ ಕರ್ತವ್ಯ, ಗೃಹಜ್ಯೋತಿ, ಕೃಷಿ ಬಳಕೆಗೆ ಸೌರ ವಿದ್ಯುತ್, ವಿದ್ಯುತ್ ಸುರಕ್ಷತೆ ಹಾಗೂ ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡ ವಿದ್ಯುತ್ ರಥವನ್ನು ರೂಪಿಸಲಾಗಿದೆ. ಈ ರಥ ದಸರಾ ಉತ್ಸವದ ದರ್ಭದಲ್ಲಿ ಮೈಸೂರಿನ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದೆ.

ಸುರಕ್ಷತೆಗೆ ಆದ್ಯತೆ:

ಈ ಬಾರಿಯ ವಿದ್ಯುತ್ ದೀಪಾಲಂಕಾರದಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವಿದ್ಯುತ್ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಎಂಎಲ್ಸಿಗಳಾದ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಶಾಸಕರು ಹಾಗೂ ಸೆಸ್ಕ್ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜು ಇತರ ಅಧಿಕಾರಿಗಳು ಭಾಗವಹಿಸಿದ್ದರು.