ಮನೆ ಸ್ಥಳೀಯ ಪುಸ್ತಕ ಮೇಳ: ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಚಾಲನೆ

ಪುಸ್ತಕ ಮೇಳ: ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಚಾಲನೆ

0

ಮೈಸೂರು: ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ  ನಡೆದ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು   ಹಿರಿಯ ಸಾಹಿತಿಗಳಾದ ನಾಡೋಜ ಹಂಪಾ ನಾಗರಾಜಯ್ಯ ಅವರು ಉದ್ಘಾಟಿಸಿದರು.

Join Our Whatsapp Group

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಮೇಳ ಎಂಬುದು  ವಾಗ್ದೇವಿಯ ಭಂಡಾರ, ಸರಸ್ವತಿಯ ಮಂದಿರ. ಎಲ್ಲಾ ಓದುಗರಿಗೂ ಸರಸ್ವತಿಯ ಅನುಗ್ರಹ ಸುಲಭವಾಗಿ ಲಭಿಸುವುದಿಲ್ಲ. ಅದಕ್ಕೆ ಶ್ರದ್ಧೆ, ಭಕ್ತಿ ಹಾಗೂ ವಿನಯದಿಂದ   ಮನಸಿಟ್ಟು ಓದಿದರೆ ಮಾತ್ರ ದೇವರಿಂದ ಆಗಲಿ ನಾವು ಮಾಡಿದ ಕೆಲಸಕ್ಕಾಗಲಿ ಪ್ರತಿಫಲ ಸಿಗುತ್ತದೆ ಎಂದು ಹೇಳಿದರು.

ಈ ಬಾರಿಯ  ಪುಸ್ತಕ ಮೇಳ 10 ದಿನಗಳ ಕಾಲ ನಡೆಯಲಿದ್ದು, ದಸರಾ ನೋಡಲು ಬಂದವರು ಈ ಮೇಳವನ್ನು  ಆನಂದಿಸಬೇಕು.  ಒಂದೇ ಸೂರಿನಡಿ ಸದಬಿರುಚಿಯ ನಾನಾ ಪುಸ್ತಕಗಳು ಲಭ್ಯವಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಪುಸ್ತಕ ಪ್ರೇಮಿಗಳಿಗೆ  ಸಲಹೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮಾತನಾಡಿ,  ಪುಸ್ತಕ ಹಾಗೂ ಸಂಸ್ಕೃತಿಯ ಆರಾಧಕರಾದ ಒಬ್ಬ ಸಾಹಿತಿಯೇ ನಾಡಹಬ್ಬ  ದಸರಾ ಮತ್ತು ಪುಸ್ತಕ ಮೇಳದ ಉದ್ಘಾಟನೆ ಮಾಡಿರುವುದು ಇತಿಹಾಸದಲ್ಲೇ ಮೊದಲು. ಇದು ಒಬ್ಬ ಸಾಹಿತಿ ಮತ್ತು ಉತ್ತಮ ವಾಗ್ಮಿಗೆ ದೊರೆತ ದೊಡ್ಡ ಗೌರವವಾಗಿದೆ ಎಂದು ತಿಳಿಸುತ್ತಾ ಈ ವೇಳೆ  ಬಸವಣ್ಣನವರ  ವಚನಗಳನ್ನು ನೆನಪಿಸಿದರು.

ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳದ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು ಮತ್ತು ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಸಾಹಿತ್ಯ ವಚನ ಚಿಂತನಾಮಾಲೆ, ವಿಶ್ವಕೋಶ, ನಿಘಂಟು ಪುಸ್ತಕಗಳು ಹೀಗೆ ಅನೇಕ ಪುಸ್ತಕಗಳು ಕಡಿಮೆ ದರದಲ್ಲಿ ಲಭ್ಯವಿದೆ. ಹಾಗಾಗಿ ಈ ಬಾರಿಯ ಪುಸ್ತಕ ಮೇಳವು ಸಾಹಿತ್ಯ ಪ್ರಿಯರಿಗೆ ಓದಲು ಅಥವಾ ಉಡುಗೊರೆ ನೀಡಲು ಸದಾವಕಾಶವಾಗಿದೆ ಎಂದರು.

ಈ ಬಾರಿಯ ಪುಸ್ತಕ ಮೇಳದಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗ, ವೇದ ಬುಕ್ ಹೌಸ್, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ತಿಳಿ ಸಾಹಿತ್ಯ ಅಕಾಡೆಮಿ, ಸ್ವಪ್ನ ಬುಕ್ ಹೌಸ್ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕದಂಬ ಪ್ರಕಾಶನ ಭಾರತೀ ಪ್ರಕಾಶನ, ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರು,ನವ ಕರ್ನಾಟಕ ಪಬ್ಲಿಕೇಶನ್, ಸಾಹಿತ್ಯ ಸ್ಥಂಬ, ಶ್ರೀ ಕನಕ ಪುಸ್ತಕ ಬಂಡಾರ ಬೆಂಗಳೂರು ಸೇರಿದಂತೆ ಹಲವು ಪ್ರಾಧಿಕಾರದ ಮಳಿಗೆಗಳನ್ನು ತೆರೆಯಲಾಗಿದ್ದು, ಇದು ಕನ್ನಡ ಪುಸ್ತಕಾಭಿಮಾನಿಗಳನ್ನು ಆಕರ್ಷಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಹಿಂದುಳಿದ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಚಿವರಾದ ಶಿವರಾಜ ಎಸ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿ ದೇವಿ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಡಾ.ಎಂ.ಡಿ ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.