ಮನೆ ಅಪರಾಧ ನೇಪಾಳ ವಿಮಾನ ಪತನ: 16 ಮೃತದೇಹ ಪತ್ತೆ

ನೇಪಾಳ ವಿಮಾನ ಪತನ: 16 ಮೃತದೇಹ ಪತ್ತೆ

0

ಕಠ್ಮಂಡು (ನೇಪಾಳ):  ನಿನ್ನೆ ನೇಪಾಳದ ಪರ್ವತಮಯ ಪ್ರದೇಶ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡಿದ್ದ ವಿಮಾನದ ಅವಶೇಗಳಿಂದ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಜಿಲ್ಲೆಯಲ್ಲಿ ಪತನಗೊಂಡಿತ್ತು. ಇದೀಗ ವಿಮಾನದ ಅವಶೇಷಗಳಿಂದ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಉಳಿದವರಿಗಾಗಿ ಶೋಧ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಗೃಹ ಸಚಿವಾಲಯ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಈ ಕುರಿತು ಮಾತನಾಡಿ, ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರಬಹುದು. ನಾವು ಪ್ರಾಥಮಿಕ ಕಾರ್ಯಾಚರಣೆ ನಡೆಸಿದ್ದು, ವಿಮಾನದಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನ ಸಮೀಪದ ಬಂಡೆಗೆ ಅಪ್ಪಳಿಸಿರುವುದರಿಂದ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆಯಿಲ್ಲ. ಆದರೆ ಅಧಿಕೃತ ಹೇಳಿಕೆ ಬರಬೇಕಿದೆ ಎಂದು ಹೇಳಿದರು.

ಭಾನುವಾರ ಬೆಳಗ್ಗೆ ಪತನಗೊಂಡ ಪ್ರಯಾಣಿಕ ವಿಮಾನದ ಅವಶೇಷಗಳನ್ನು ವಾಯುವ್ಯ ನೇಪಾಳದ ಮುಸ್ತಾಂಗ್ ಜಿಲ್ಲೆಯ ಸನೋಸ್ವೇರ್, ಥಾಸಾಂಗ್ -2ರಲ್ಲಿ ಪತ್ತೆ ಹಚ್ಚಲಾಗಿದೆ. ವಿಮಾನವು ರಾಡಾರ್ ಸಂಪರ್ಕ ಕಳೆದುಕೊಂಡ ಸುಮಾರು 20 ಗಂಟೆಗಳ ನಂತರ ಪತ್ತೆಯಾಗಿತ್ತು.