ಮನೆ ಅಪರಾಧ ದೇವನೂರು 3ನೇ ಹಂತದ 40*60 ಅಳತೆಯ 6 ನಿವೇಶನಗಳ ಮೂಲ ದಾಖಲೆಗಳು ಮುಡಾದಿಂದ ನಾಪತ್ತೆ

ದೇವನೂರು 3ನೇ ಹಂತದ 40*60 ಅಳತೆಯ 6 ನಿವೇಶನಗಳ ಮೂಲ ದಾಖಲೆಗಳು ಮುಡಾದಿಂದ ನಾಪತ್ತೆ

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Join Our Whatsapp Group

ಈ ನಡುವೆ ಮುಡಾದಲ್ಲಿ ಶೇ. 50:50ರ ಅನುಪಾತದಡಿ ಮಂಜೂರಾಗಿರುವ ನಿವೇಶನಗಳ ಮೂಲ ಕಡತಗಳೇ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಮಂಜೂರು ಮಾಡಲಾಗಿದ್ದ ವಿಜಯನಗರ 3 ಮತ್ತು 4ನೇ ಹಂತದ ಕೋಟ್ಯಾಂತರ ರೂ. ಬೆಲೆ ಬಾಳುವ ವಿವಿಧ ಅಳತೆಯ 14 ನಿವೇಶನಗಳನ್ನು ಪ್ರಾಧಿಕಾರಕ್ಕೆ ವಾಪಾಸ್ ನೀಡಿದ್ದಾರೆ. ಇದೀಗ ಮುಡಾ ಕಛೇರಿಯ ಅಭಿಲೇಖಾಲಯದಲ್ಲಿರಬೇಕಾದ ನಿವೇಶನಗಳ ಮೂಲ ಕಡತಗಳೇ ನಾಪತ್ತೆಯಾಗಿವೆ. ಅವುಗಳು ಏನಾದವು ಎಂಬುದರ ಬಗ್ಗೆ ಕಚೇರಿ ದಾಳಲೆಗಳ ಟ್ರ್ಯಾಕ್ ರೆಕಾರ್ಡ್ ಮಾಯವಾಗಿದೆ. ಸ್ಥಿರಾಸ್ತಿ ಮತ್ತು ರೇರಾ ವಿಶ್ಲೇಷಕರೂ ಆದ ಸಾಮಾಜಿಕ ಕಾರ್ಯಕರ್ತ ಎಂ.ಡಿ ಆದೀಶ ಸಾಗರ, 2024ರ ಸೆಪ್ಟೆಂಬರ್‍ 5 ರಂದು ಮುಡಾ ಅಧ್ಯಕ್ಷ ಕೆ.ಮರೀಗೌಡ, ಆಯುಕ್ತ ಎ ಎನ್  ರಘುನಂದನ್ ಅವರಿಗೆ  ಲಿಖಿತ ದೂರು ನೀಡಿದ್ದು, ನೀವೇಶನಗಳ ಮೂಲ ಕಡತಗಳು ಕಣ್ಮರೆಯಾಗಿರುವ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಮೈಸೂರಿನ ಎನ್ ಆರ್ ಮೊಹಲ್ಲಾದ ರಾಜೇಂದ್ರ ನಗರ ಕೆಸರ 4ನೇ ಕ್ರಾಸ್ ನಿವಾಸಿಗಳಾದ ಕಾಂತ ಮತ್ತು ಶಾಂತ ಕುಮಾರ್ ಎಂಬುವವರ ಜಂಟಿ ಹೆಸರಿಗೆ ಮಂಜೂರಾಗಿದ್ದ, ದೇವನೂರು 3ನೇ ಹಂತದ 40*60 ಅಡಿ ಅಳತೆಯ, 1/83, 1/84, 1/85, 1/86, 1/87 ಮತ್ತು 633/ಬಿ ಒಟ್ಟು 6 ನಿವೇಶನಗಳ ಮಂಜೂರಾತಿ ಮೂಲ ಕಡತಗಳನ್ನು ಕದ್ದು ನಾಶಪಡಿಸಲಾಗಿದ್ದು, ಈ ಬಗ್ಗೆ ತುರ್ತು ಇಲಾಖಾ ವಿಚಾರಣೆ ನಡೆಸಿ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಲಕ್ಷ್ಮಿಪುರಂ ಠಾಣೆಗೆ ದೂರು ನೀಡಿ, ಎಫ್ ಐ ಆರ್ ದಾಖಲಿಸಬೇಕೆಂದೂ ಒತ್ತಾಯಿಸಿದ್ದಾರೆ.

 ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ತಿಂಗಳಾದರೂ ಕೋರಿರುವ ಮಾಹಿತಿ ನೀಡಲಿಲ್ಲ. ಕೊನೆಗೆ ಮುಡಾ ವಲಯ ಕಛೇರಿ5ಬಿ ನಿವೇಶನ ಶಾಖೆ ವಿಶೇಷ ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ಸಂಪರ್ಕಿಸಿದಾಗ ಕಚೇರಿ ಸಹಾಯಕಿ ರತ್ನ ಇಲ್ಲವೇ ವಿಷಯ ನಿರ್ವಾಹಕ ಕೆ.ಸಿ.ಉಮೇಶ್ ರನ್ನು ವಿಚಾರಿಸುವಂತೆ ತಿಳಿಸಿದರು ಎಂದು ಆದೀಶ ಸಾಗರ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಸದರಿಯವರನ್ನು ಸಂಪರ್ಕಿಸಿದಾಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್  ಆಪ್ತರಾದ ಬೆಂಗಳೂರಿನ ಸುರೇಶ್, ಉಪೇಂದ್ರ ಸಿಂಗ್, ಮೈಸೂರಿನ ರಮೇಶ್ ಹಾಗೂ ಇತರರು ಸಚಿವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಬಂದು ಕಡತ ಕೊಂಡೊಯ್ದರೆಂಬುದು ತಿಳಿಯಿತು ಎಂದು ದೂರುದಾರರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

2024ರ ಮೇ 30 ರಂದು ಅಂದಿನ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಆಪ್ತ ಶಾಖೆಯ ಪ್ರಥಮ ದರ್ಜೆ ಸಹಾಯಕ ಎಂ.ಪ್ರಶಾಂತ್ ಪ್ರಾಧಿಕಾರದ ಅಭಿಲೇಖಾಲಯ (ರೆಕಾರ್ಡ್ ರೂಂ) ದಿಂದ ಅನಧಿಕೃತವಾಗಿ 1384 ರಿಂದ 14141 ರವರೆಗಿನ ಕ್ರಮ ಸಂಖ್ಯೆಯ ಮಂಜೂರಾತಿ ಪತ್ರಗಳ ನಮೂನೆಯನ್ನು ಸರಕು ಪಟ್ಟಿ ಸಂಖ್ಯೆ 0869, ರಶೀದಿ ಸಂಖ್ಯೆ 1161, ವಿತರಣಾ ಸಂಖ್ಯೆ 300ರಂತೆ ಶೇ.50:50ರ ಅನುಪಾತದಲ್ಲಿ ಕಾನೂನು ಬಾಹಿರವಾಗಿ ಮಂಜೂರು ಮಾಡಿರುವ 6 ನಿವೇಶನಗಳ ಮೂಲ ಕಡತಗಳನ್ನು ತರಿಸಿಕೊಂಡಿದ್ದಾರೆ ಎಂದು ಆದೀಶ ಸಾಗರ ತಿಳಿಸಿದ್ದಾರೆ.

ಈ ನಿವೇಶನಗಳ ಮಂಜೂರಾತಿ ಪ್ರಕ್ರಿಯೆ ಪೂರ್ಣ ನಡಾವಳಿಯ ಮೂಲ ದಸ್ತಾವೇಜುಗಳ ಕಡತಗಳು ವಿಶೇಷ ತಹಶೀಲ್ದಾರ್, ವಲಯ 5ಬಿ ಕಚೇರಿಯಲ್ಲಿ ಶಾಶ್ವತವಾಗಿ ರಕ್ಷಿಸಬೇಕಾದ ದಾಖಲೆಗಳಾಗಿವೆ. ಆದರೆ ಈಗ ಮುಡಾ ಕಚೇರಿಯಲ್ಲಿ ಈ ಕಡತಗಳೇ ಕಣ್ಮರೆಯಾಗಿದ್ದು, ಅದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಬಿಎನ್ ಎಸ್ ಎಸ್ ಸೆಕ್ಷನ್ 238, ಅಪರಾಧದ ಸಾಕ್ಷಿ ಕಣ್ಮರೆಯಾಗಲು ಕಾರಣ, ಸೆಕ್ಷನ್ 241 ಸರ್ಕಾರಿ ದಾಖಲೆ 303(1) ಆಸ್ತಿ ಅಥವಾ ದಾಖಲೆಗಳ ಕಳ್ಳತನ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದ್ದಾರೆ.

ಹೈಕೋರ್ಟ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ಇಡಿ)ಗಳಲ್ಲಿ ಮುಡಾ ನಿವೇಶನಗಳ ಻ಕ್ರಮ ಹಂಚಿಕೆ ಸಂಬಂಧ ಪ್ರಕರಣಗಳು ದಾಖಲಾಗಿ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗವು ತನಿಖೆ ನಡೆಸುತ್ತಿರುವುದರಿಂದ ಮುಡಾದಲ್ಲಿ ಕೆಲವರು ಅಕ್ರಮ ನಿವೇಶನಗಳ ಮೂಲ ಕಡತಗಳನ್ನೇ ಕಳವು ಮಾಡಿ ನಾಶಪಡಿಸುತ್ತಿದ್ದಾರೆ ಎಂದು ಆದೀಶ ಸಾಗರ ಗಂಭೀರ ಆರೋಪ ಮಾಡಿದ್ದಾರೆ.