ಮನೆ ರಾಜ್ಯ ಮೂಲ ಸೌಕರ್ಯ ಕೊರತೆ: ಮುಂದಿನ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ

ಮೂಲ ಸೌಕರ್ಯ ಕೊರತೆ: ಮುಂದಿನ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ

0

ಮೈಸೂರು(Mysuru): ಮೂಲಭೂತ ಸೌಕರ್ಯಗಳಿಲ್ಲದೇ ಬೇಸತ್ತಿರುವ ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಿಪುರದ ಗ್ರಾಮಸ್ಥರು  ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧಾರಿಸಿದ್ದಾರೆ.

ಬೆಂಕಿಪುರ ಗ್ರಾಮ ಸುಮಾರು 50 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಆದರೆ ಗ್ರಾಮಕ್ಕೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳ ಕೊರತೆ ಇದೆ.  ಈ ಕುರಿತು ಹಲವಾರು ಬಾರಿ ಶಾಸಕರು, ಸಂಸದರು, ತಾಲ್ಲೂಕು ಹಾಗೂ ಜಿಲ್ಲಾಡಳಿತಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ ವ್ಯವಸ್ಥೆ ಇಲ್ಲದೇ ಶಾಲಾ ಮಕ್ಕಳು ಕಷ್ಟಪಡುತ್ತಿದ್ದು, ಸುಮಾರು 150 ಶಾಲಾ ಮಕ್ಕಳು ಪ್ರತಿನಿತ್ಯ 2 ಕಿ.ಮೀ ನಡೆದುಕೊಂಡೇ ಅಥವಾ ಇತರೆ ವಾಹನಗಳನ್ನು ಆಶ್ರಯಿಸಿಕೊಂಡು ಶಾಲೆಗೆ ಹೋಗುತ್ತಿದ್ದಾರೆ.

ಇನ್ನು ಉದ್ಯೋಗಸ್ಥ ಯುವಕ, ಯುವತಿಯರು  ಸಹ ದೂರದ ಮೈಸೂರಿಗೆ ಹೋಗಿ ಬರಲು ಬಹಳ ಕಷ್ಟಪಡುತ್ತಿದ್ದಾರೆ. ಹೆಣ್ಣುಮಕ್ಕಳು 10 ನೇ ತರಗತಿ ತೇರ್ಗಡೆಯಾದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ . ಅಲ್ಲದೇ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಸ್ಮಶಾನಕ್ಕಾಗಿ ಜಾಗ ಗುರುತಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಆಗಮಿಸುತ್ತಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.