ಬೆಳಗಾವಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಊಹೆ ಮಾತ್ರ ಅದು ಬಿಟ್ಟು ಬೇರೆ ಏನು ಅಲ್ಲ ಎಂದು ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
ಕಿತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ ಸೇರಿದಂತೆ ಎಲ್ಲ ಉನ್ನತ ಮಟ್ಟದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಿಂತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ಊಹೆ ಎಂದು ಹೇಳಿದ್ದಾರೆ.
ಯಾರು ಏನೇನು ಪ್ರಯತ್ನ ಮಾಡುತ್ತಾರೆ ಎಂಬುದು ಅವರ ವಯಕ್ತಿಕ ವಿಚಾರ. ಆದರೆ ಪಕ್ಷದ ಹಂತದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ.
ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ. ಪಕ್ಷದಲ್ಲಿ ಇದುವರೆಗೆ ನನಗೆ ಎಲ್ಲವೂ ಸಿಕ್ಕಿದೆ. ಮುಖ್ಯವಾಗಿ ಪಕ್ಷದ ಅಧ್ಯಕ್ಷರು ಸೇರಿದಂತೆ ಪ್ರತಿಯೊಬ್ಬರೂ ಗೌರವ ಕೊಟ್ಟಿದ್ದಾರೆ. ಇನ್ನೇನು ಬೇಕು. ಕ್ಷೇತ್ರದ ಜನರು ಆರು ಬಾರಿ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನು ಮೂರು ಬಾರಿ ಸಚಿವರನ್ನಾಗಿ ಮಾಡಿದೆ.
ಈಗ ಕಂದಾಯ ಸಚಿವನಾಗಿದ್ದೇನೆ. ಮಾಡಲಿಕ್ಕೆ ಸಾಕಷ್ಟು ಕೆಲಸವಿದೆ. ಸಮಯ ಸಾಲುತ್ತಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.