ದೆಹಲಿ : ಹರ್ಯಾಣದ ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ 6000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್ ಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹರ್ಯಾಣ ವಿಧಾನಸಭೆಯಲ್ಲಿ ಬಹುಮತದ ಅಂಕವನ್ನು ದಾಟಿ 48 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಕ್ಟೋಬರ್ 5 ರಂದು ನಡೆದ ಹರ್ಯಾಣ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.
ಒಲಿಂಪಿಯನ್ ವಿನೇಶ್, ಬಿಜೆಪಿಯ ಕ್ಯಾಪ್ಟನ್ ಯೋಗೇಶ್ ಬೈರಾಗಿ, ಆಪ್ ಟಿಕೆಟ್ ನಲ್ಲಿ ಸ್ಪರ್ಧಿಸಿದ ಮಾಜಿ ವೃತ್ತಿಪರ ಕುಸ್ತಿಪಟು ಕವಿತಾ ದಲಾಲ್ ಅವರನ್ನು ಪರಾಭವಗೊಳಿಸಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ವಿನೇಶ್, ಇದು ಜನರ ಹೋರಾಟವಾಗಿತ್ತು ಅವರು ಗೆದ್ದಿದ್ದಾರೆ. ನಾನು ಕೇವಲ ಮುಖವಾಗಿದ್ದೆ. ನನಗೆ ಸಿಕ್ಕಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಬಿಜೆಪಿಗಿಂತ ಹಿನ್ನಡೆಯಾಗಿರುವ ಬಗ್ಗೆ ಕೇಳಿದಾಗ “ಅಂತಿಮ ಫಲಿತಾಂಶಗಳಿಗಾಗಿ ಕಾಯೋಣ. ಕಾಂಗ್ರೆಸ್ ಖಂಡಿತವಾಗಿಯೂ ಗೆಲ್ಲುತ್ತದೆ” ಎಂದಿದ್ದಾರೆ.
ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಅನರ್ಹಗೊಂಡು ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್, ಸೆಪ್ಟೆಂಬರ್ 6 ರಂದು ಕಾಂಗ್ರೆಸ್‌ಗೆ ಸೇರಿದರು. ಕೆಲವೇ ಗಂಟೆಗಳ ನಂತರ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿತ್ತು.
“ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ನಾವು ಎದುರಿಸಬೇಕಾಗಿ ಬಂದಿದ್ದನ್ನು ಕ್ರೀಡಾಪಟುಗಳು ಎದುರಿಸಬೇಕಾಗಿಲ್ಲ ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.
ಕಳೆದ ವರ್ಷ ಫೋಗಟ್ ಅವರು ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುದೀರ್ಘ ಪ್ರತಿಭಟನೆಯನ್ನು ನಡೆಸಿದರು. ರಾಜಕೀಯ ಪ್ರವೇಶದ ನಂತರ ಕಾಂಗ್ರೆಸ್‌ಗೆ ಧನ್ಯವಾದ ಅರ್ಪಿಸಿದ ಅವರು, ” ಕೆಟ್ಟ ಸಮಯದಲ್ಲಿ ಮಾತ್ರ ಅವರ ಜೊತೆ ಯಾರು ನಿಂತಿದ್ದಾರೆಂದು ಗೊತ್ತಾಗುತ್ತದೆ. ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತು ನಮ್ಮ ನೋವು, ಕಣ್ಣೀರನ್ನು ಅರ್ಥ ಮಾಡಿತ್ತು ಎಂದಿದ್ದರು.