ಮನೆ ಅಪರಾಧ ಪಿಎಸ್ಐ ನೇಮಕಾತಿ ಹಗರಣ: ತಲೆಮರೆಸಿಕೊಂಡಿದ್ದ ದಂಪತಿಗಳ ಬಂಧನ

ಪಿಎಸ್ಐ ನೇಮಕಾತಿ ಹಗರಣ: ತಲೆಮರೆಸಿಕೊಂಡಿದ್ದ ದಂಪತಿಗಳ ಬಂಧನ

0

ಕಲಬುರಗಿ(Kalburgi): ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಲುಕಿ ಎರಡು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಪಿಎಸ್ಐ ಅಕ್ರಮ ಪ್ರಕರಣದ ಆರೋಪಿಗಳಾದ ಶಾಂತಿ ಬಾಯಿ ಹಾಗೂ ಆಕೆಯ ಪತಿ ಬಸಯ್ಯ ನಾಯಕನನ್ನು ಕೊನೆಗೂ ಸಿಐಡಿ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ.

ಅಕ್ಟೋಬರ್ 30, 2021 ರಂದು ನಡೆದ ಪಿಎಸ್ಐ ಲಿಖಿತ ಪರೀಕ್ಷೆಯ ನಂತರ, ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿತ್ತು. ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣದ ತನಿಖೆಗೆ ಆದೇಶಿಸಿದರು. ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ಪೊಲೀಸರು, ಅಕ್ರಮದಲ್ಲಿ ಭಾಗಿಯಾದ 32ಕ್ಕೂ ಅಧಿಕ ಆರೋಪಿಗಳನ್ನು ಈವರೆಗೆ ಬಂಧಿಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ.

ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಹ ಬಂಧಿಸಲಾಗಿದೆ. ಆದರೆ, ಪ್ರಕರಣ ಹೊರ ಬೀಳುತ್ತಿದಂತೆಯೇ ತಲೆ ಮರೆಸಿಕೊಂಡ ಆರೋಪಿ ದಂಪತಿಗಳನ್ನು ಕೊನೆಗೂ ಸಿಐಡಿ ತಂಡ ಬಂಧಿಸಿದೆ.

ಆರೋಪಿ ಶಾಂತಿ ಬಾಯಿ ಲಂಚ ಕೊಟ್ಟು ಪರೀಕ್ಷೆ ಬರೆದು ಪಾಸಾಗಿದ್ದ ಅಭ್ಯರ್ಥಿ. ಇನ್ನು ಅಕ್ರಮಕ್ಕೆ ಸಹಕರಿಸಿದ ಆರೋಪ ಆಕೆಯ ಪತಿ ಬಸಯ್ಯ ನಾಯಕನ ಮೇಲಿದೆ. ತೆಲಂಗಾಣದ ಹೈದ್ರಾಬಾದ್ ನಲ್ಲಿ ದಂಪತಿಯನ್ನು ಬಂಧಿಸಿದ ಪೊಲೀಸರು, ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.

ಅಭ್ಯರ್ಥಿ ಶಾಂತಿ ಬಾಯಿ ಪ್ರಕರಣದ ಕಿಂಗ್ ಪಿನ್ ಗಳಾದ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಹೀಗಾಗಿ, ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಹೈದ್ರಾಬಾದ್ ನಲ್ಲಿ ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಕಳೆದ ಎರಡು ತಿಂಗಳಿನಿಂದ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದರು. ಕೊನೆಗೂ ದಂಪತಿ ಹೈದರಾಬಾದ್ ನಲ್ಲಿ ಸೆರೆ ಸಿಕ್ಕಿದ್ದಾರೆ.