ಮಂಡ್ಯ (Mandya)-ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನ ಸಾಮಾಜಿಕ ಪರಿಶೋಧನೆಯು ಪರಿಣಾಮಕಾರಿ ಸಾಧನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ದಿವ್ಯಾಪ್ರಭು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆಯುವ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗಳಲ್ಲಿ ಅಧ್ಯಕ್ಷತೆ ವಹಿಸುವ ತಾಲ್ಲೂಕು ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ನಿಟ್ಟಿನಲ್ಲಿ ಗುಣಮಟ್ಟದಿಂದ ಕೂಡಿದ ಸಾಮಾಜಿಕ ಪರಿಶೋಧನೆ ನಡೆಯಬೇಕು ಎಂದು ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿನಾಕಾರಣ ಆಕ್ಷೇಪಣೆಗಳನ್ನು ಮಾಡದೇ ಸಾಮಾಜಿಕ ಪರಿಶೋಧನೆಯ ಗಾಂಭೀರ್ಯತೆ ಮತ್ತು ಮಹತ್ವವನ್ನು ಅರಿತು ಪರಿಶೋಧನಾ ಕಾರ್ಯ ಕೈಗೊಂಡಾಗ ಸರ್ಕಾರದಿಂದ ಸಿಗುವ ಸಹಾಯಧನ ಸದುಪಯೋಗವಾಗಿದೆಯೇ ಎಂಬುದನ್ನು ತಿಳಿಯಲು ಸಾಧ್ಯ ಎಂದು ಅವರು ಹೇಳಿದರು.
ತರಬೇತಿ ನೀಡಿದ ರಾಜ್ಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎಂ.ಕೆ.ಕೆಂಪೇಗೌಡ ಅವರು, ಸಾಮಾಜಿಕ ಪರಿಶೋಧನಾ ಪ್ರಕ್ರಿಯೆ ಹಾಗೂ ಗ್ರಾಮಸಭಾ ಅಧ್ಯಕ್ಷತೆವಹಿಸುವ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, 14 ಮತ್ತು 15ನೇ ಹಣಕಾಸು ಯೋಜನೆಯ ಮಾರ್ಗಸೂಚಿ ಹಾಗೂ ಸಾಮಾಜಿಕ ಪರಿಶೋಧನಾ ನಿಯಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ) ಜಿ.ಧನರಾಜು, ಯೋಜನಾ ನಿರ್ದೇಶಕ ಧನರಾಜ್ ಬೊಳಾರೆ, ಸಹಾಯಕ ಯೋಜನಾಧಿಕಾರಿ ಷಣ್ಮುಗಂ, ಸಹಾಯಕ ಕಾರ್ಯದರ್ಶಿ ಸುಬ್ರಹ್ಮಣ್ಯ ಶರ್ಮ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾಮಾಜಿಕ ಪರಿಶೋಧನಾ ಸಂಯೋಜಕರು ಇದ್ದರು.