ಮೈಸೂರು (Mysuru)-ಭಾರತಿ ಯೋಗಧಾಮ ಭವಿಷ್ಯದ ಜಗತ್ತಿನ ಸವಾಲುಗಳಿಗೆ ಉತ್ತರ ನೀಡುವ ತರುಣರನ್ನು ತಯಾರು ಮಾಡುವ ಕೇಂದ್ರವಾಗಬೇಕು. ಯಾವುದೇ ಕಾರಣಕ್ಕೂ ವಾಣಿಜ್ಯೀಕರಣವಾಗಬಾರದು ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಹೇಳಿದರು.
ಮೈಸೂರು ಸಮೀಪದ ಉತ್ತನಹಳ್ಳಿ ವಿಜಯಗಿರಿಯಲ್ಲಿನ ಭಾರತಿ ಯೋಗಧಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸರಸ್ವತಿ ಸದನಂ, ವಿದ್ಯಾನಂದಿನಿ ಗುರುಕುಲಂ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಿ ಯೋಗಧಾಮ ಕಳೆದು ಹೋಗಿರುವ ಸನಾತನ ಹಿಂದೂಧರ್ಮದ ಸತ್ಯಗಳನ್ನು ಹುಡುಕಿ ಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಇಲ್ಲಿನ 25 ಎಕರೆ ಭೂಮಿಯಲ್ಲಿ ಜಗತ್ತಿಗೆ ಜ್ಞಾನವನ್ನು ಹಂಚುವ ಕೆಲಸವಾಗಬೇಕು. ನಮ್ಮ ಯುವಕರು ಶಿಕ್ಷಣದಿಂದ ಅಂಕ, ಉದ್ಯೋಗ, ಹಣಗಳಿಕೆ ಭೋಗಜೀವನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಾಜಕಾರಣಿಗಳು ವೇದಿಕೆಗಳಲ್ಲಿ ಸರ್ವ ಧರ್ಮಗಳು ಶಾಂತಿಯನ್ನು ಬೋಧಿಸುತ್ತವೆ ಎಂದು ಸಾರಾ ಸಗಟಾಗಿ ಸುಳ್ಳು ಹೇಳುತ್ತೇವೆ. ಯಾವ ಧರ್ಮ ಶಾಂತಿಯನ್ನು ಬೋಧಿಸುತ್ತದೆ? ಹಿಂದೆ ಹಿಂದೂ ಧರ್ಮದಲ್ಲಿ ಅಭಿಮಾನ್ಯ ಶೂನ್ಯತೆಯ ದಟ್ಟ ದಾರಿದ್ರ್ಯ ಕಾಡಿತ್ತು. ಶೈವರು, ವೈಷ್ಣವರು, ಶ್ರೀವೈಷ್ಣವರು ಎಂದು ಹೊಡೆದಾಡಿಕೊಂಡು ಸಾಯುತ್ತಿದ್ದರು. ಯಾವುದೇ ಹೊಸ ಧರ್ಮ ಪಂಥಗಳು ಪ್ರಾರಂಭಕ್ಕೂ ಮುನ್ನ ಹಲವಾರು ಚರ್ಚೆಗಳು ನಡೆದು ಬಡಿದಾಡಿಕೊಂಡಿದ್ದನ್ನೂ ಕಂಡಿದ್ದೇವೆ. ಆದರೆ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಭಾರತಕ್ಕೆ ಕಾಲಿಟ್ಟಾಗ ಯಾವುದೇ ಪ್ರತಿರೋಧ ತೋರಲಿಲ್ಲ. ಖಡ್ಗ ತೋರಿಸಿದರು, ಮೂಳೆ ತಿನ್ನಿಸಿದರು ಎಂದು ಅವುಗಳನ್ನು ಒಪ್ಪಿಕೊಂಡಿದ್ದೇವೆ. ಹಿಂದೂ ಧರ್ಮದ ದೇವರುಗಳಲ್ಲಿ ಶಕ್ತಿ ಇಲ್ಲ ಎಂದು ವಿಗ್ರಹಗಳನ್ನು ಕಿತ್ತು, ಮಂದಿರಗಳನ್ನು ಒಡೆದು ಹಾಕಿದರು. ಮಸೀದಿ ಕಟ್ಟಲು ಅವರಿಗೆ ಬೇರೆ ಜಾಗ ಸಿಗಲಿಲ್ಲವೇ? ಭಾರತದಲ್ಲಿ ನೆಲೆಯೂರಿದ್ದ ಕೇವಲ 42 ಸಾವಿರ ಬ್ರಿಟೀಷರು ಇಡೀ ದೇಶವನ್ನು ಆಳಿದರು ಎಂದರೆ ನಮ್ಮ ದೌರ್ಬಲ್ಯಗಳೇನು ಎಂದು ಭಾರತಿ ಯೋಗಧಾಮ ಸಂಸ್ಥೆ ಯುವಕರಿಗೆ ತಿಳುವಳಿಕೆ ನೀಡಬೇಕಿದೆ ಎಂದರು.
ಮೈಸೂರು ಮಹಾರಾಜರು ಯೋಗಕ್ಕೆ ಆದ್ಯತೆ ನೀಡಿದ್ದಾರೆ. ಪ್ರಧಾನಿಗಳು ಮೈಸೂರಿಗೆ ಆಗಮಿಸುವುದು ಖಚಿತವಾಗಿದೆ. ಸ್ಥಳ ಪರಿಶೀಲನೆ ನಡೆಯುತ್ತಿದ್ದು, ಬಹುತೇಕ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ಸಂಭವವಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ವಿಷ್ಣುಪ್ರಸಾದ್ ಹೆಬ್ಬಾರ್ ಅವರಿಗೆ ಜ್ಯೋತಿಷಾ ವಿದ್ಯಾವಾರಿಧಿ, ಡಾ.ಮಹೇಶ್ ಮುನಿಯಂಗಳ ಅವರಿಗೆ ವಾಸ್ತು ವಿದ್ಯಾವಾರಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ವಿ.ಸತೀಶ್, ಡಾ.ಕೆ.ಎಲ್.ಶಂಕರನಾರಾಯಣ ಜೋಯೀಸ್ ಮತ್ತಿತರರು ಉಪಸ್ಥಿತರಿದ್ದರು.