ಮನೆ ರಾಜಕೀಯ ಚನ್ನಪಟ್ಟಣ ಉಪ ಚುನಾವಣೆ: ಹೆಚ್​.ಡಿ.ಕುಮಾರಸ್ವಾಮಿಗೆ ಸಂಪೂರ್ಣ ಅಧಿಕಾರ: ಆರ್.ಅಶೋಕ್

ಚನ್ನಪಟ್ಟಣ ಉಪ ಚುನಾವಣೆ: ಹೆಚ್​.ಡಿ.ಕುಮಾರಸ್ವಾಮಿಗೆ ಸಂಪೂರ್ಣ ಅಧಿಕಾರ: ಆರ್.ಅಶೋಕ್

0

ಉಡುಪಿ: ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಸಂಬಂಧ ಹೆಚ್​.ಡಿ.ಕುಮಾರಸ್ವಾಮಿ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಕುಮಾರಸ್ವಾಮಿಯವರಿಗೆ ಈ ವಿಚಾರದಲ್ಲಿ ಸಂಪೂರ್ಣ ಅಧಿಕಾರ ಇದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

Join Our Whatsapp Group

ಈ ಬಗ್ಗೆ ನಗರದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಟಿಕೆಟ್​ ಬಗ್ಗೆ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಬಳಿ ಚರ್ಚೆ ಮಾಡುತ್ತೇವೆ. ಯೋಗೇಶ್ವರ್​ ಅವರೇ ಅಭ್ಯರ್ಥಿ ಆದರೆ ಒಳ್ಳೆಯದು ಎಂದು ದೆಹಲಿಯ ವರಿಷ್ಠರಿಗೆ ಹೇಳಿದ್ದೇವೆ. ಆದರೆ, ಕುಮಾರಸ್ವಾಮಿ ಅವರೂ ಒಪ್ಪಬೇಕು. ಈ ವಿಚಾರದಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿದೆ. ಕೊನೆಯದಾಗಿ ಅವರ ತೀರ್ಮಾನದಂತೆ ಮಾಡುತ್ತೇವೆ. ನಾನು ಕೂಡ ಯೋಗೇಶ್ವರ್ ಜೊತೆ ಮಾತನಾಡುತ್ತೇನೆ. ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.

ಉಪ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ನಾಯಕರ ಜೊತೆಗೆ ಒಂದು ಸುತ್ತಿನ ಚರ್ಚೆಯನ್ನು ಮಾಡಿದ್ದೇನೆ. ನಾವು ಹುಬ್ಬಳ್ಳಿ ವಿಚಾರವಾಗಿ ಹೋರಾಟ ನಿರ್ಧರಿಸಿದ್ದೆವು. ಸದ್ಯ ಹುಬ್ಬಳ್ಳಿ ಹೋರಾಟವನ್ನು ಮುಂದೆ ಹಾಕಿದ್ದೇವೆ. ಎಲ್ಲಾ ಶಾಸಕರು ಸೇರಿ ದೆಹಲಿ ಚಲೋ ಮಾಡಬೇಕಿತ್ತು. ಅದನ್ನೂ ಮುಂದೂಡಿದ್ದೇವೆ ಎಂದು ಹೇಳಿದರು.

ನಾನೇ ಅಭ್ಯರ್ಥಿ ಅಂತ ಡಿ.ಕೆ.ಶಿವಕುಮಾರ್ ಎಲ್ಲಾ ಕಡೆಯೂ ಹೇಳುತ್ತಾರೆ. ಆದರೆ, ನೂರಕ್ಕೆ ನೂರು ಡಿ.ಕೆ.ಶಿವಕುಮಾರ್ ಸ್ಪರ್ಧಿಸಲ್ಲ. ಮಾರ್ಕ್ ಮಾಡಿಕೊಳ್ಳಿ. ನಾನು ಹೇಳುತ್ತಿದ್ದೇನೆ, ಬೇರೆ ಅಭ್ಯರ್ಥಿ ನಿಲ್ಲುತ್ತಾರೆ. ಅದು ಕಾಂಗ್ರೆಸ್ ಪಕ್ಷದ ನಿರ್ಧಾರ. ಚುನಾವಣೆಗೊಂದು ಸ್ಟಂಟ್ ಇರಲೆಂದು ಹಾಗೆ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ, ನಾನೇ ಅಭ್ಯರ್ಥಿ ಎಂದು ಕೌಂಟರ್ ಕೊಟ್ಟಿರುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡೂ ಸುಳ್ಳು, ನಿಜವಾದ ಅಭ್ಯರ್ಥಿ ಬೇರೆ ಆಗಿದ್ದಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿ, ಎನ್​ಡಿ ಎ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಮುಡಾ ಹಾಗೂ ವಾಲ್ಮೀಕಿ ಹಗರಣಗಳ ವಿರುದ್ಧ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿಯ ಹೋರಾಟದಿಂದ ಇವತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬಂದಿದೆ. ನಮ್ಮ ಹೋರಾಟದಿಂದಲೇ ಇ.ಡಿ, ಲೋಕಾಯುಕ್ತ ತನಿಖೆಗಳು ಆಗುತ್ತಿವೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದರು.