ಮನೆ ಅಪರಾಧ ಪೊಲೀಸ್ ಪೇದೆಯ ಮನೆಯಲ್ಲೇ ಕೈ ಚಳಕ ತೋರಿದ ಚಾಲಾಕಿ ಕಳ್ಳರು

ಪೊಲೀಸ್ ಪೇದೆಯ ಮನೆಯಲ್ಲೇ ಕೈ ಚಳಕ ತೋರಿದ ಚಾಲಾಕಿ ಕಳ್ಳರು

0
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಪೊಲೀಸ್ ಪೇದೆಯ ಮನೆಯಲ್ಲೇ ಚಿನ್ನ, ಬೆಳ್ಳಿ, ನಗದು ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.

Join Our Whatsapp Group

ನಗರದ ಚೆನ್ನಿಪುರದ ಮೋಳೆ ರಸ್ತೆಯಲ್ಲಿನ ಪಟ್ಟಣ ಪೊಲೀಸ್ ಠಾಣೆಯ ಪೇದೆ ಮನುಕುಮಾರ್ ಎಂಬವರ ಮನೆಯಲ್ಲಿ ಮಂಗಳವಾರ ತಡರಾತ್ರಿ ಕಳ್ಳತನವಾಗಿದ್ದು, 80 ಗ್ರಾಂ. ಚಿನ್ನಾಭರಣ, 1 ಕೆಜಿ ಬೆಳ್ಳಿ ಹಾಗೂ 40 ಸಾವಿರ ರೂ. ನಗದು ಕಳವು ಆಗಿದೆ. ಪೇದೆ ಮನು ಹಾಗೂ ಅವರ ಕುಟುಂಬದವರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ದರ್ಶನ ಪಡೆಯಲು ತೆರಳಿದ್ದಾಗ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳತನ ನಡೆದಿದೆ.

ಬಳಿಕ ಬುಧವಾರ ಮಧ್ಯಾಹ್ನದ ವೇಳೆ ಬಂದು ನೋಡಿದಾಗ ಮನೆಯಲ್ಲಿದ್ದ ಬೀರು ಒಡೆದಿರುವುದು ಗಮನಕ್ಕೆ ಬಂದಿದೆ. ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಕಳೆದ ವಾರ ನಗರದ ಮುಖ್ಯರಸ್ತೆಯಾದ ಡೀವಿಯೇಷನ್ ರಸ್ತೆಯ ಮೂರು ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು.

ಸ್ಥಳಕ್ಕೆ ಎಸ್ಪಿ ಭೇಟಿ:

ನಗರದಲ್ಲಿ ಕಳ್ಳತನವಾಗಿರುವ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಪೇದೆ ಮನು ಅವರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ ಪೆಕ್ಟರ್ ಎ.ಕೆ.ರಾಜೇಶ್ ಇದ್ದರು.