ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ಶಿಕ್ಷ ಕೋಪೈಲಟ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಅವರು ಶಿಕ್ಷ ಕೋಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭವನ್ನು ಆಧರಿಸಿ ಸಮಗ್ರ ಬೋಧನಾ ಸಂಪನ್ಮೂಲಗಳು ಮತ್ತು ಕಲಿಕೆಯ ಅನುಭವಗಳನ್ನು ರಚಿಸಲು ಶಿಕ್ಷ ಕೋಪೈಲಟ್ ಯೋಜನೆ ಶಿಕ್ಷಕರನ್ನು ಸಶಕ್ತಗೊಳಿಸುತ್ತದೆ. ಕರ್ನಾಟಕ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ 750ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಂದ ಆಯ್ದ 1000 ಶಿಕ್ಷಕರಿಗೆ ಶಿಕ್ಷ ಕೋಪೈಲಟ್ -AI ಚಾಲಿತ ಡಿಜಿಟಲ್ ಸಹಾಯವನ್ನು ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಕೋಪೈಲಟ್ ಉತ್ತಮ ಗುಣಮಟ್ಟದ ವೈಯಕ್ತೀಕರಿಸಿದ ವಿಷಯವನ್ನು ರಚಿಸಲು ಶಿಕ್ಷಕರನ್ನು ಸಬಲೀಕರಣಗೊಳಿಸುತ್ತದೆ. ಶಿಕ್ಷಕರ ಹಿಮ್ಮಾಹಿತಿ ಆಧಾರದ ಮೇಲೆ ಚಟುವಟಿಕೆಗಳು, ಮೌಲ್ಯಮಾಪನಗಳು, ನೈಜ-ಪ್ರಪಂಚದ ಉದಾಹರಣೆಗಳು, ಅನ್ವಯಗಳು, ಕಿರು ವೀಡಿಯೊಗಳು ಮತ್ತು ಸಮಗ್ರ ಪಾಠ ಯೋಜನೆಗಳಂತಹ ಬೋಧನಾ ಸಂಪನ್ಮೂಲಗಳನ್ನು ರಚಿಸಲು ಶಿಕ್ಷ ಕೋಪೈಲಟ್ ಸಹಾಯ ಮಾಡುತ್ತದೆ. ಇದು ಸ್ವಯಂ ಕಲಿಕೆ ಮತ್ತು ಸಂವಾದಾತ್ಮಕ ವಿಷಯ ರಚನೆಗಾಗಿ ಶಿಕ್ಷಕರಿಗೆ ಚಾಟ್-ಬಾಟ್ ಅನ್ನು ಸಹ ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಡಾ. ಕೆ.ವಿ.ತ್ರಿಲೋಕಾಚಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.