ಪುತ್ತೂರು: ಕುಂಬ್ರ ಬಳಿಯ ಸಾರೆಪುಣಿ ಪಾದಡ್ಕದಲ್ಲಿ ಗುಡಿಸಲೊಂದು ಬೆಂಕಿಗೆ ಆಹುತಿಯಾದ ಘಟನೆ ಅ. 18ರಂದು ಸಂಭವಿಸಿದೆ.
ಪಾದೆಡ್ಕ ನಿವಾಸಿ ಪದ್ಮಾವತಿ ಅವರ ಗುಡಿಸಲಿಗೆ ಬೆಂಕಿ ತಗಲಿದ್ದು, ಮನೆಯೊಳಗೆ ಬ್ಯಾಗ್‌ವೊಂದರಲ್ಲಿ ಇಟ್ಟಿದ್ದ 15 ಸಾವಿರ ರೂ. ನಗದು, ದಾಖಲೆ ಹಾಗೂ ಇನ್ನಿತರ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಗೋಡೆಯ ಬದಲಾಗಿ ಗುಡಿಸಲಿನ ಸುತ್ತ ಅಳವಡಿಸಿದ್ದ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಮನೆಯಲ್ಲಿ ಪದ್ಮಾವತಿ ಮತ್ತು ಅವರ 8 ವರ್ಷದ ಪುತ್ರ ವಾಸವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಮನೆಮಂದಿ ಯಾರೂ ಇರಲಿಲ್ಲ. ಕೂಲಿ ಕೆಲಸಕ್ಕೆ ಹೋಗಿದ್ದ ಪದ್ಮಾವತಿ ಅವರಿಗೆ ಗುಡಿಸಲಿಗೆ ಬೆಂಕಿ ಬಿದ್ದ ವಿಚಾರವನ್ನು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ, ಹುಕ್ರ ಮೊದಲಾದವರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಘಟನ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿದ್ದಾರೆ.
ಬೆಂಕಿ ಹಿಂದೆ ಅನುಮಾನ?
ಗುಡಿಸಲಿಗೆ ಬೆಂಕಿ ತಗಲಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಶಾರ್ಟ್ ಸರ್ಕ್ನೂಟ್ ಆಗಲು ಸಾಧ್ಯವಿಲ್ಲ. ಮನೆಯ ಒಲೆಯಲ್ಲಿ ಬೆಂಕಿ ಕಿಡಿ ಇರಲಿಲ್ಲ. ಹೀಗಾಗಿ ಯಾರಾದರೂ ಕಿಡಿಗೇಡಿಗಳು ಕೃತ್ಯ ಎಸಗಿರುವ ಬಗ್ಗೆ ಶಂಕೆ ಮೂಡಿದೆ.