1. ಮೊದಲು ನೆಲದಮೇಲೆ ಕುಳಿತು ತೊಡೆಗಳನ್ನು ಅಗಲಿಸಿಡಬೇಕು.
2. ಬಳಿಕ,ಎಡಮಂಡಿಯನ್ನು ಹಿಂಗಡೆಗೆ ಬಾಗಿಸಿ, ಎಡ ಮೀನಖಂಡವು ಎಡತೊಡೆಯ ಹಿಂಬದಿಯನ್ನು ಮುಟ್ಟುವಂತಿರಬೇಕು.
3. ಈಗ ಎಡಗೈಯಿಂದ ಎಡಪಾದವನ್ನು ಮೇಲೆತ್ತಿ ಎಡಇಮ್ಮಡಿಯು ಎಡಟೊಂಕದ ಕೀಳನ್ನು ಮುಟ್ಟುವಂತೆ ಇರಿಸಬೇಕು.ಬಳಿಕ ‘ಭೆಕಾಸನ’ದಲ್ಲಿರುವಂತೆ ಎಡಪಾದವನ್ನು ಹಿಡಿದುಕೊಳ್ಳಬೇಕು.
4. ಆಮೇಲೆ ಬಲಗೈಯಿಂದ ಬಲಪಾದವನ್ನೆತ್ತಿ ಎಡತೊಡೆಯ ಮೂಲಕ್ಕೆ ಸೇರಿಸಿ ‘ಪದ್ಮಾಸನ’ದ ಭಂಗಿಗೆ ತರಬೇಕು.
5. ಆ ಬಳಿಕ, ಎರಡು ಕೈಗಳನ್ನು ಉಪಯೋಗಿಸಿ ಎರಡಂಗಾಲುಗಳೂ ಒಂದನ್ನೂಂದು ಮುಟ್ಟುವಂತೆ ಅವನ್ನು ಜೋಡಿಸಬೇಕು.
6. ಆಗ ಮುಂಡವು ‘ಪದ್ಮಾಸನ’ದಲ್ಲಿಯ ಕಾಲೆಡೆಗೆ ವಾಲಿಸಿಕೊಂಡಿರುತ್ತದೆ. ಆಮೇಲೆ ಕೈಗಳನ್ನು ಒಂದಕ್ಕೊಂದು ಬಿಗಿಸಿ ಸಮತೋಲನಸ್ಥಿತಿಗೆ ತಂದು, ಆ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಆಳವಾದ ಉಸಿರಾಟದಿಂದ ನೆಲೆಸಬೇಕು.
7. ಕೊನೆಯಲ್ಲಿ, ಕೈಗಳ ಮತ್ತು ಕಾಲುಗಳ ಬಿಗಿತವನ್ನು ಸಡಿಲಿಸಿ ಇದೇ ಭಂಗಿಯನ್ನು ಮೇಲಿನ ಕ್ರಮದಲ್ಲಿ ಮತ್ತೊಂದು ಕಡೆಯೂ ನಡೆಸಬೇಕು. ಇಲ್ಲಿ ಬಲಪಾದವನ್ನು ‘ಭೇಕಾ ಸನ’ದಲ್ಲಿಯೂ ಎಡಪಾದವನ್ನು ‘ಪದ್ಮಾಸನ’ದಲ್ಲಿಯೂ ಇಡಬೇಕು. ಭಂಗಿಯಲ್ಲಿ ನೆಲೆಸುವ ಕಾಲ ಎರಡೂ ಕಡೆಯಲ್ಲಿ ಸಮವಾಗಿರಬೇಕು.
ಪರಿಣಾಮಗಳು
ಈ ಆಸನವು ಹಿಂದಿನ ಆಸನದಂತೆ ಕಾಲುಗಳಲ್ಲಿಯ ಪೆಡಸನ್ನು ನೀಗಿಸಿ,ಅವುಗಳಲ್ಲಿ ನೋವನ್ನು ಕಳೆದು, ಜನೇಂದ್ರಿಯಗಳನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ. ಅಲ್ಲದೆ ಇದು ಬೆನ್ನೆಲುಬುಗೆ ಹುರುಪನ್ನು ಕೊಟ್ಟು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ.