ಒಂದು ತಾತ್ಕಾಲಿಕ ಪಯಣ- ಹೀಗೊಂದು ವಿಭಿನ್ನ ಟೈಟಲ್ ನಡಿ ಸಿನಿಮಾ ತಯಾರಾಗಿದ್ದು, ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.
ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಯುವ ನಟ ಸೂಚನ್ ಶೆಟ್ಟಿ ನಟಿಸಿದ್ದಾರೆ. ಚಿತ್ರದಲ್ಲಿ ಸೂಚನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಟ್ರೇಲರ್ನಲ್ಲಿ ಎದ್ದು ಕಾಣುತ್ತಿದೆ. ಮೂಲತಃ ಕುಂದಾಪುರದವರಾದ ಸೂಚನ್ ಶೆಟ್ಟಿ ಸರಿಸುಮಾರು ಹನ್ನೆರಡು ವರ್ಷಗಳಿಂದ ಚಿತ್ರರಂಗದ ಭಾಗವಾಗಿದ್ದಾರೆ.
“ಒಂದು ತಾತ್ಕಾಲಿಕ ಪಯಣ’ ಮೂಲಕ ಚಿತ್ರರಂಗದಲ್ಲಿ ನೆಲೆ ಸಿಗುತ್ತದೆ ಎಂಬ ನಂಬಿಕೆ ಅವರದು. ಕಾರ್ತಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರವಿದು. ಆರು ವರ್ಷಗಳ ಕಾಲ ಸೂಚನ್ ಶೆಟ್ಟಿ ರವಿ ಬಸ್ರೂರು ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದರು. ಅವರು ನಿರ್ದೇಶನ ಮಾಡಿದ್ದ “ಕಡಲ್’ ಎಂಬ ಚಿತ್ರದಲ್ಲಿ ಒಂದು ನೆಗೆಟಿವ್ ರೋಲ್ ಮಾಡಿದ್ದರು. ಅದು ಸೂಚನ್ ಪಾಲಿಗೆ ನಟನಾಗಿ ಮೊದಲ ಚಿತ್ರ. ಆ ಪಾತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಮೂಡಿಕೊಂಡಿತ್ತು.














