ಮನೆ ಸುದ್ದಿ ಜಾಲ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರ ಕೊರತೆ: ಪ್ರೊ.ಜಿ.ಹೇಮಂತ್‌ಕುಮಾರ್ ಬೇಸರ

ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರ ಕೊರತೆ: ಪ್ರೊ.ಜಿ.ಹೇಮಂತ್‌ಕುಮಾರ್ ಬೇಸರ

0

ಮೈಸೂರು (Mysuru)- ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರ ಕೊರತೆ ಇದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ (Prof G.Hemantkumar) ಬೇಸರ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ವತಿಯಿಂದ ಅಕ್ಕಮಹಾದೇವಿ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಇಂದು ವಿವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅಧ್ಯಾಪಕರ ಸಂಖ್ಯೆ ಕುಂಠಿತಗೊಂಡಿದೆ. ಎಷ್ಟೋ ವಿಭಾಗಗಳಲ್ಲಿ ಏಕ ಅಧ್ಯಾಪಕರಿದ್ದಾರೆ. ಮತ್ತೆ ಕೆಲವು ವಿಭಾಗಗಳಲ್ಲಿ ಕಾಯಂ ಬೋಧಕರೇ ಇಲ್ಲ. ಸರ್ಕಾರದಿಂದ ಅನುದಾನದ ನೆರವು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಬೇಸರಿಸಿದರು.

ಪ್ರೊ.ಬಿ.ಕೆ.ತುಳಸಿಮಾಲಾ ಅವರು ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. 30 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ವಿವಿ ಚಿಕ್ಕದಾದರೂ ಅದರ ಆಡಳಿತ ವ್ಯಾಪ್ತಿ ದೊಡ್ಡದು. ಪ್ರೊ.ಬಿ.ಕೆ.ತುಳಸಿಮಾಲಾ ಅವರು ಎರಡು ವರ್ಷ ಕುಲಪತಿ ಹಾಗೂ ಎರಡು ವರ್ಷ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಓದುವ ಅಭ್ಯಾಸ ಇತ್ತು. ಶಿಕ್ಷಕ ಸಾಧಕನಾಗಿದ್ದಾಗ ಮಾತ್ರ ಉನ್ನತ ಹುದ್ದೆ ಸಿಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜಾ ಭಗವತ್ ಮೊಮೊರಿಯಲ್ ಮಹಾಜನ ಪೋಸ್ಟ್ ಗ್ರಾಜುಯೇಟ್ ಸೆಂಟರ್‌ ನ ನಿರ್ದೇಶಕರಾದ ಪ್ರೊ.ಸಿ.ಕೆ.ರೇಣುಕಾಚಾರ್ಯ, ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಮಹೇಶ್ ಸೇರಿದಂತೆ ಇತರರು ಇದ್ದರು.