ಕಾರ್ತಿಕ ಶುದ್ಧ ಪಾಡ್ಯದಂದು ಗೋಪೂಜೆ ನೆರವೇರುತ್ತದೆ, ಕಾರ್ತಿಕ ಶುದ್ಧ ದ್ವಾದಶಿಯಂದು ತುಳಸಿ ಪೂಜೆಯು ನಡೆಯುತ್ತದೆ. ಕಾರ್ತಿಕ ಬಹಳ ತದಿಗೆ ಮತ್ತು ಚೌತಿ ಲಕ್ಷ ದೀಪೋತ್ಸವವು ಎರಡು ದಿನ ನಡೆಯುವ ಕಾರ್ಯಕ್ರಮವಾಗಿದೆ. ಮೊದಲನೇ ದಿನ ಬೆಳಿಗ್ಗೆ ಲಕ್ಷದೂರ್ವಾರ್ಚನೆ ನಡೆದು ಶ್ರೀ ಉದ್ಭವ ಗಣಪತಿ ಸ್ವಾಮಿಗೆ ಸಮರ್ಪಣೆಯಾಗುತ್ತದೆ ರಾತ್ರಿ ಮಹಾಮಂಗಳಾರತಿ ನಂತರ ದೇವಸ್ಥಾನದ ಒಳಗೆ ಸಂಜೆ ಪ್ರಾಂಗಣದಲ್ಲಿ ದೀಪವನ್ನು ಹಚ್ಚಿ ಪಲ್ಲಕ್ಕಿಯ ಶ್ರೀದೇವಿಯ ಉತ್ಸವ ಅಷ್ಟಾವಧಾನ ಸೇವೆಯ ಸಹಿತ ಐದು ಸುತ್ತಿನ ಕಾರ್ಯಕ್ರಮವು ನಡೆಯುತ್ತದೆ.
ಎರಡನೇ ದಿನ ಬೆಳಿಗ್ಗೆ ಸುಮಂಗಲಿಯರಿಂದ ಶ್ರೀ ಮಾತೆಗೆ ಕೋಟಿಕುಂಕುಮಾರ್ಚನೆ ನೆನೆದು ಸಮರ್ಪಣೆಯಾಗುತ್ತದೆ. ಹಾಗೂ ಭಾಗವಹಿಸಿದ ಸುಮಂಗಳಿಯರಿಗೆ ಭಾಗೀನ ಪ್ರಸಾದ ನೀಡಲಾಗುತ್ತದೆ.ರಾತ್ರಿ ಮಂಗಳಾರತಿ ನಂತರ ದೇವಸ್ಥಾನದಿಂದ ಶ್ರೀ ಮಾತೆಯ ಪಲ್ಲಕ್ಕಿ ಉತ್ಸವ ಹೊರಟು ನಂತರ ರಥದಲ್ಲಿ ಕುಳ್ಳಿರಿಸಿ ಈ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದವರೆಗೆ ರಥೋತ್ಸವವನ್ನು ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ರಥಬೀದಿಯ ಎರಡು ಬದಿಯಲ್ಲಿ ಮೂರು ಸಾಲಿನ ದೀಪಾರಾಧನೆ ಇರುತ್ತದೆ ಆನಂತರ ರಥದಿಂದ ಅವರೋಹಣ ಮಾಡಿ ಪುನಃ ಪಲ್ಲಕ್ಕಿಯಲ್ಲಿ ದೇವಸ್ಥಾನದ ಒಳಗೆ ಆವರಣಕ್ಕೆ ಉತ್ಸವದಲ್ಲಿ ದೇವರನ್ನು ತೆಗೆದುಕೊಂಡು ಬಂದ ನಂತರ ದೀಪಾರಾಧನೆಯೊಂದಿಗೆ ದೇವಸ್ಥಾನದ ಒಳ ಆವರಣದಲ್ಲಿರುವ ಸಣ್ಣ ರಥಕ್ಕೆ ದೇವರನ್ನು ಕೂರಿಸಿ ಪುನಃ ಅಷ್ಟಾವಧಾನ ಸೇವೆಯೊಂದಿಗೆ ಐದು ಸುತ್ತು ಉತ್ಸವ ನಡೆಯುತ್ತದೆ ಮರುದಿನ ಸಂಪ್ರೋಕ್ಷಣೆ ನಡೆಯುತ್ತದೆ ಎಂಬುದಾಗಿ ತಿಳಿದು ಬಂದಿತ್ತದೆ.
ಕಾರ್ತಿಕ ಶುದ್ಧ ತ್ರಯೋದಶಿಯಂದು ಅಂಕರಕಣದ ಶ್ರೀ ಸಿದ್ಧ ಗಣಪತಿ ಸ್ವಾಮಿಗೆ ದೀಪೋತ್ಸವವು ನಡೆಯುತ್ತದೆ.
ಮಾರ್ಗಶಿರ ಮಾಸದ ಷಷ್ಟಿಯಂದು ಶ್ರೀ ಕ್ಷೇತ್ರದ ರಥೋತ್ಸವ ಪತ್ರಿಕಾ ಪ್ರಸಾದ ವಿತರಣಾ ತಿರುಗಾಟ ಪ್ರಾರಂಭ.
ಧನುರ್ ಮಾಸದಲ್ಲಿ ಹೊಸ ಅಕ್ಕಿ ಪೂಜೆಯ ಅಂಗವಾಗಿ ಹಿಂದಿನ ದಿನದ ರಾತ್ರಿಯಿಂದ ಹೊರನಾಡು ಗ್ರಾಮದವರು ಅಕ್ಕಿ ಪದಾರ್ಥವನ್ನು ಉಪಯೋಗಿಸದೆ ಮಾರನೇ ದಿನ ಶ್ರೀಮಾತೆಗೆ ಹೊಸ ಅಕ್ಕಿ ಸಮರ್ಪಣೆ ಆದ ನಂತರದಲ್ಲಿ ಅಕ್ಕಿ ಪದಾರ್ಥಗಳನ್ನು ಸ್ವೀಕರಿಸುವ ಪದ್ಧತಿ ಅನಾದಿಯಿಂದಲೂ ನಡೆದು ಬಂದಿದೆ. ಈ ಆಚರಣೆ ಕೈಗೊಳ್ಳುವುದು ಇಲ್ಲಿನ ವಿಶೇಷ ಪದ್ಧತಿ ವರ್ಷ ಹೊಸ ಅಕ್ಕಿ ನೈವೇದ್ಯದ ಶುಭದಿನವನ್ನು ಧರ್ಮ ಕರ್ತರು ನಿಗದಿಪಡಿಸುವ ಏಳು ದಿನಗಳ ಮೊದಲು ನಿಗದಿಪಡಿಸಿದ ಜಾಗದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರು ಹೋಗಿ ಆ ತೋಟದಲ್ಲಿ ಬೆಳೆದ ಬಾಳೆ ಮರಕ್ಕೆ ಪೂಜಿಸಿ ತಾಯಿಯ ಪ್ರಸಾದವನ್ನು ಆ ಬಾಳೆ ಮರಕ್ಕೆ ಹಾಕಿ ಆ ಬಾಳೆ ಕೊನೆಯನ್ನು ಕಡಿದು ತಂದು ಗರ್ಭಗುಡಿಯಲ್ಲಿ ಇಟ್ಟಿರುತ್ತಾರೆ ಅದು ಸರಿಯಾಗಿ ಏಳನೇ ದಿನಕ್ಕೆ ಹಣ್ಣಾಗಿರುತ್ತದೆ ಆ ನಿಗದಿಪಡಿಸಿ ದಿನ ಶ್ರೀ ಕ್ಷೇತ್ರದಿಂದ ನಾಟಿ ಮಾಡಿರುವ ಗದ್ದೆಯಿಂದ ಬತ್ತವನ್ನು ಧರ್ಮಕರ್ತರು ತಮ್ಮ ಕುಟುಂಬ ಪರಿವಾರ ಗ್ರಾಮಸ್ಥರು ಕಟ್ಟಿಗೆ ಕೋಲು ಛತ್ರಿ, ಚಾಮರ, ವಾದ್ಯ, ಸಹಿತ ಪ್ರಧಾನ ಅಚ್ಚಕರು ಒಳಗೊಂಡು ಹೋಗಿ ಆ ಭತ್ತದ ತೆನೆಗೆ ಪೂಜಿಸಿ ಅದನ್ನು ಶಾಸ್ತ್ರೋಕ್ತವಾಗಿ ಕುಯ್ದು, ಪ್ರಧಾನ ಅರ್ಚಕರು ಅದನ್ನು ತಲೆಯಲ್ಲಿ ಹೊತ್ತು ತಂದು ಆ ಬತ್ತವನ್ನು ಶ್ರೀ ಮಾತೆಗೆ ಅರ್ಪಿಸುತ್ತಾರೆ. ಆನಂತರ ಉಳಿದ ಭತ್ತದ ತೆನೆಯನ್ನು ಕೊಯಿಲು ಮಾಡಿ ಬೇರ್ಪಡಿಸಿ ಬಂದ ಅಕ್ಕಿಯಲ್ಲಿ ಆ ದಿನ ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಣೆ ಮಾಡಿ ಆ ಅಕ್ಕಿಯನ್ನು ಅಡಿಯಕ್ಕಿ ಎಂದು ಬರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ.ಈ ಆಚರಣೆ ಕೈಗೊಳ್ಳುವುದು ಇಲ್ಲಿನ ವಿಶೇಷ ಪದ್ಧತಿಗಳಲ್ಲಿ ಒಂದು.