ಹುಬ್ಬಳ್ಳಿ: ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಇದೀಗ ಬಿಜೆಪಿಯಲ್ಲಿ ಆಗುತ್ತಿರುವುದೇನು? ರಾಜಕಾರಣದಲ್ಲಿ ಇಂತಹ ಹೇಳಿಕೆ ನೀಡುವ ಮೊದಲು ಯೋಚಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸುಮಾರು ಐದಾರು ಕುಟುಂಬಗಳು ಕುಟುಂಬ ರಾಜಕಾರದಲ್ಲಿವೆ. ಇದು ರಾಜಕಾರಣದಲ್ಲಿ ಸ್ವಾಭಾವಿಕ. ಇಂತಹ ಹೇಳಿಕೆ ನೀಡುವ ಮೊದಲು ಯೋಚಿಸಬೇಕು. ಹೇಳಿಕೆ ನೀಡುತ್ತಿದ್ದವರೇ ಇದೀಗ ಕುಟುಂಬ ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದರು.
ಶಿಗ್ಗಾವಿಯಲ್ಲಿ ಅಭ್ಯರ್ಥಿಗಿಂತ ಪಕ್ಷ ಕೆಲಸ ಮಾಡಬೇಕಿದೆ. ಈ ಕಾರ್ಯವನ್ನು ಪಕ್ಷ ಮಾಡಲಿದೆ. ನಮ್ಮ ಅಭ್ಯರ್ಥಿ ಗೆಲ್ಲಲು ಸಚಿವರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. 25 ವರ್ಷಗಳಿಂದ ನಾವು ಶಿಗ್ಗಾವಿಯಲ್ಲಿ ಗೆದ್ದಿಲ್ಲ. ಈ ಬಾರಿ ಗೆಲ್ಲಲು ಪಕ್ಷ ಪ್ರಾಮಾಣಿಕ ಕೆಲಸ ಮಾಡಲಿದೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಅಸಮಧಾನಗಳು ಹಾಗೂ ಒಂದಿಷ್ಟು ಗೊಂದಲಗಳು ಸಾಮಾನ್ಯ. ಅದನ್ನು ಪ್ರಧಾನ ಕಾರ್ಯದರ್ಶಿಗಳು ಬಗೆಹರಿಸುವ ಕೆಲಸ ಮಾಡಲಿದ್ದಾರೆ. 15 ಜನ ಆಕಾಂಕ್ಷಿಗಳಿದ್ದ ಕಾರಣ ಟಿಕೆಟ್ ವಿಳಂಬವಾಗಿದೆಯಷ್ಟೇ ಎಂದರು.