ಮನೆ ರಾಜಕೀಯ ಹರಕೆ ಕುರಿಯಾದ ಸಿ.ಪಿ.ಯೋಗೇಶ್ವರ್‌, ನಿಖಿಲ್‌ ಕುಮಾರಸ್ವಾಮಿ ಗೆಲ್ಲಲಿದ್ದಾರೆ: ಆರ್‌.ಅಶೋಕ

ಹರಕೆ ಕುರಿಯಾದ ಸಿ.ಪಿ.ಯೋಗೇಶ್ವರ್‌, ನಿಖಿಲ್‌ ಕುಮಾರಸ್ವಾಮಿ ಗೆಲ್ಲಲಿದ್ದಾರೆ: ಆರ್‌.ಅಶೋಕ

0

ಬೆಂಗಳೂರು: ಸಿ.ಪಿ.ಯೋಗೇಶ್ವರ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವುದರಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರೆಬೆಲ್‌ ಆಗಿದ್ದಾರೆ. ಈ ಉಪಚುನಾವಣೆಯಲ್ಲಿ ಯೋಗೇಶ್ವರ್‌ ಹರಕೆ ಕುರಿಯಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಲೇವಡಿ ಮಾಡಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ, ಜೆಡಿಎಸ್‌ ಒಟ್ಟಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಜೆಡಿಎಸ್‌ ಪಕ್ಷ ಕಾರ್ಯಕರ್ತರ ಸಭೆ ನಡೆಸಿ, ಒಮ್ಮತದಿಂದ ಅಭ್ಯರ್ಥಿಯನ್ನು ಆರಿಸಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಸಿ.ಪಿ.ಯೋಗೇಶ್ವರ್‌ ಅವರನ್ನು ಆರಿಸಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ರೆಬೆಲ್‌ ಆಗಿದ್ದು, ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್‌ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಎಸ್‌ಸಿ, ಎಸ್‌ಟಿ ಸಮುದಾಯದ ಹಣ ದುರ್ಬಳಕೆಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಗಣಿ ಹಗರಣದಲ್ಲಿ ಶಾಸಕ ಸತೀಶ್‌ ಸೈಲ್‌ ತಪ್ಪಿತಸ್ಥರು ಎಂಬುದು ಸಾಬೀತಾಗಿ ಶಿಕ್ಷೆ ನೀಡಲಾಗಿದೆ. ಕಾಂಗ್ರೆಸ್‌ ಲೂಟಿಕೋರರ ಪಾರ್ಟಿ ಎಂಬುದು ಸಾಬೀತಾಗಿದೆ. ಗಣಿ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯನವರು ಪಂಚೆ ಎತ್ತಿಕೊಂಡು ಪಾದಯಾತ್ರೆ ಮಾಡಿ ನೃತ್ಯ ಮಾಡಿದ್ದರು. ಬಳಿಕ ಕಾಲು ನೋವಿಗೆ ಮಸಾಜ್‌ ಮಾಡಿಸಿಕೊಂಡಿದ್ದರು. ಈಗ ಅವರದ್ದೇ ಪಕ್ಷದ ಶಾಸಕ ಗಣಿಯಲ್ಲಿ ಲೂಟಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಗಣಿಗಳಲ್ಲಿ ಲೂಟಿ ಮಾಡಿದ್ದು ಕಾಂಗ್ರೆಸ್‌ ಪಕ್ಷ ಎಂಬುದು ಜನರಿಗೆ ಗೊತ್ತಾಗಿದೆ ಎಂದರು.

ನಿಖಿಲ್‌ ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಅನುಕಂಪವಿದೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಲು ನಾವೆಲ್ಲರೂ ಪ್ರಯತ್ನ ಮಾಡಿದ್ದೆವು. ಆದರೂ ಅವರು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದವರು ಈಗ ಕಾಂಗ್ರೆಸ್‌ನಲ್ಲಿ ಮೂರನೇ ಸಾಲಿನಲ್ಲಿ ಕುಳಿತಿದ್ದಾರೆ. ಕಾಂಗ್ರೆಸ್‌ ನಾಯಕರು ಅವರನ್ನು ಹರಕೆ ಕುರಿ ಮಾಡಿ ಮುಗಿಸಲಿದ್ದಾರೆ. ಜನರಿಗೆ ಒಳ್ಳೆಯ ನಾಯಕತ್ವ ಬೇಕಾಗಿದೆ. ನಿಖಿಲ್‌ ಕುಮಾರಸ್ವಾಮಿ ಅವರು ಗೆಲ್ಲುವುದು ಸ್ಪಷ್ಟವಾಗಿದೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಪಣ ತೊಟ್ಟು ಕೆಲಸ ಮಾಡುತ್ತೇವೆ ಎಂದರು.

ರಾಜ್ಯ ಸರ್ಕಾರ 16 ತಿಂಗಳಲ್ಲಿ ಚನ್ನಪಟ್ಟಣ ತಾಲೂಕಿನ ಅಭಿವೃದ್ಧಿಗೆ ಒಂದು ರೂಪಾಯಿ ಹಣ ನೀಡಿಲ್ಲ. ಸಂಬಳ ಕೊಡಲು ಕೂಡ ದುಡ್ಡಿಲ್ಲದೆ ಸರ್ಕಾರ ಪಾಪರ್‌ ಆಗಿದೆ. ಮಳೆ ಹಾನಿಯಾಗಿ ರೈತರು ಕಂಗಾಲಾಗಿದ್ದರೂ ಪರಿಹಾರ ಕೊಡಲು ಕಾಸಿಲ್ಲ. ರಾಜಧಾನಿ ಬೆಂಗಳೂರು ಮುಳುಗುತ್ತಿದ್ದರೂ ಸರ್ಕಾರಕ್ಕೆ ಪ್ರಜ್ಞೆ ಇಲ್ಲ ಎಂದರು.