ಮನೆ ರಾಜ್ಯ ಮಳೆ ಹಾನಿ ಸಭೆ: ಡಿಸಿ, ಸಿಇಒಗಳಿಗೆ ಕೊಟ್ಟ ಸಿಎಂ ಸಿದ್ದರಾಮಯ್ಯ ಸೂಚನೆ

ಮಳೆ ಹಾನಿ ಸಭೆ: ಡಿಸಿ, ಸಿಇಒಗಳಿಗೆ ಕೊಟ್ಟ ಸಿಎಂ ಸಿದ್ದರಾಮಯ್ಯ ಸೂಚನೆ

0

ಬೆಂಗಳೂರು: ಕಳೆದ 15 ದಿನದಿಂದ ಕರ್ನಾಟಕದೆಲ್ಲೆಡೆ ಆರ್ಭಟಿಸುತ್ತಿರುವ ಮಳೆಯಿಂದಾಗಿ ಅವಾಂತರಗಳಿಗೆ ಕೊನೆಯಿಲ್ಲದಂತಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಮಳೆ ಹಾನಿ ಸಂಬಂಧ ಡಿಸಿ, ಜಿ.ಪಂ. ಸಿಇಒಗಳ ಜತೆ ಸಿಎಂ ಸಭೆ ಮಾಡಿದ್ದು, ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.

Join Our Whatsapp Group

ನೆರೆ ಪೀಡಿತ ಪ್ರದೇಶಗಳಿಗೆ ಸ್ವತಃ ಡಿಸಿಗಳು ಭೇಟಿ ನೀಡಬೇಕು. ಪರಿಶೀಲನೆ ಮಾಡಿ ತಕ್ಷಣ ಪರಿಹಾರ ನೀಡಬೇಕು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಅಕ್ಟೋಬರ್‌ನಿಂದ ಡಿಸೆಂಬರ್​ವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಡ್ಯಾಂಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಮುಖ ಡ್ಯಾಂಗಳಲ್ಲಿ ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ನೀರು ಇತ್ತು. ಈ ಬಾರಿ ಜಲವಿದ್ಯುತ್‌ ಉತ್ಪಾದನೆಗೆ ಉತ್ತಮ ಪ್ರಮಾಣದ ನೀರು ಲಭ್ಯವಾಗಿದೆ ಎಂದಿದ್ದಾರೆ.

ಕಾವೇರಿ ಕಣಿವೆ ಮತ್ತು ಕೃಷ್ಣಾ ಕಣಿವೆಯಲ್ಲೂ ಉತ್ತಮ ನೀರು ಸಂಗ್ರಹವಿದೆ. ನೀರಾವರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಸಭೆ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಬಗ್ಗೆ ಡಿಸಿ, ಸಿಇಒಗಳು, ಎಸ್​ಪಿಗಳ ಸಭೆ ಮಾಡಿದ್ದೇನೆ. ಬೆಂಗಳೂರು ಸೇರಿ ಹಲವೆಡೆ ಹಿಂಗಾರು ಮಳೆಯಿಂದ ಹಾನಿಯಾಗಿದೆ. ಅಕ್ಟೋಬರ್ 1ರಿಂದ 25ರವರೆಗೆ 181 ಮೀ‌.ಮೀ ಅಂದರೆ ಅತೀ ಹೆಚ್ಚು ಮಳೆಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈವರೆಗೆ 25 ಜನರು ಮಳೆಯಿಂದ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ರಾಜ್ಯದ ಹಲವೆಡೆ 2,074 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆ ಹಾನಿಗೆ 1.20 ಲಕ್ಷ ರೂ. ಪರಿಹಾರ ನೀಡಬೇಕು. ಸಣ್ಣಪುಟ್ಟ ಹಾನಿಯಾದರೆ 50 ಸಾವಿರ ರೂ. ಪರಿಹಾರ ಕೊಡುತ್ತೇವೆ. ಈ ಪರಿಹಾರ ನವೆಂಬರ್, ಅಕ್ಟೋಬರ್ ತಿಂಗಳಲ್ಲೂ ಅನ್ವಯ ಆಗಲಿದೆ. ಜತೆಗೆ ಮನೆ ನಿರ್ಮಾಣ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

80 ಸಾವಿರ ಹೆಕ್ಟೇರ್ ಬೆಳೆ‌ಹಾನಿ

ಬೆಳೆ ಹಾನಿ ಸುಮಾರು 105900 ಹಾನಿಯಾಗಿದೆ. ಜಂಟಿ ಸರ್ವೇ ಮಾಡಿ ವಾರದೊಳಗೆ ವರದಿ ನೀಡಲು ಹೇಳಿದ್ದೇವೆ. ಕೃಷಿ ಜಮೀನು 9000 ಸಾವಿರ ಹೆಕ್ಟೇರ್, 30 ಸಾವಿರ ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹಾನಿಯಾಗಿದೆ. 48 ಗಂಟೆಯಲ್ಲಿ ಪರಿಹಾರ ನೀಡಲು‌ ಹೇಳಿದ್ದೇನೆ. ಡಿಸಿ, ಸಿಇಒ‌ಗಳ ಬಳಿ‌ 666 ಕೋಟಿ ರೂ. ಹಣ ಇದೆ. 80 ಸಾವಿರ ಹೆಕ್ಟೇರ್ ಬೆಳೆ‌ಹಾನಿಯಾಗಿದೆ. ಕೆರೆ ಒತ್ತುವರಿ ತೆರವು ಗೊಳಿಸಲು ಹೇಳಿದ್ದೇನೆ. ಕ್ಯಾಷ್ಮಂಟೇರಿಯಾದಲ್ಲಿ ಒತ್ತುವರಿ ಆಗಿದೆ ತೆರವು ಮಾಡಬೇಕು. ಹೂಳು ತೆಗೆಯುವುದಕ್ಕೂ ಹೇಳಿದ್ದೇವೆ ಎಂದಿದ್ದಾರೆ.

ಬಿತ್ತನೆ ಬೀಜ ನಷ್ಟ ಆಗಿದ್ದರೆ ಬೀಜ ಸರಬರಾಜು ಮಾಡಲು ಸೂಚನೆ‌ ನೀಡಿದ್ದೇವೆ. ಜಿಲ್ಲಾ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಎಲ್ಲಿ‌ ಪ್ರವಾಹ ಮನೆ ಹಾನಿ, ಜೀವ ಹಾನಿ, ಜಾನುವಾರ ಹಾನಿ ಆಗಿದೆ, ಅಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿ‌ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.