ಮನೆ ರಾಜಕೀಯ ಪಠ್ಯಪುಸ್ತಕ ಪರಿಷ್ಕರಣೆ: ವರದಿ ಕೈಸೇರಿದ ನಂತರ ಸೂಕ್ತ ಕ್ರಮ-ಸಿಎಂ ಬೊಮ್ಮಾಯಿ

ಪಠ್ಯಪುಸ್ತಕ ಪರಿಷ್ಕರಣೆ: ವರದಿ ಕೈಸೇರಿದ ನಂತರ ಸೂಕ್ತ ಕ್ರಮ-ಸಿಎಂ ಬೊಮ್ಮಾಯಿ

0

ಉಡುಪಿ(Udupi): ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಸಮಗ್ರ ವರದಿಯನ್ನು ಶಿಕ್ಷಣ ಸಚಿವರಿಗೆ ಸೂಚಿಸಲಾಗಿದ್ದು, ಜೂನ್ 2ರಂದು ವರದಿ ಕೈಸೇರಿದ ನಂತರ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಮಣಿಪಾಲದ ಕಂಟ್ರಿ ಇನ್‌ ಹೋಟೆಲ್‌ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆಗಳನ್ನು ತಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪಠ್ಯ ಪರಿಷ್ಕರಣೆ ಸಂಬಂಧ ಸ್ವಾಮೀಜಿಗಳು, ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲರ ಮನವಿಯನ್ನೂ ಸರ್ಕಾರ ಪರಿಗಣಿಸಲಿದೆ.ಪಠ್ಯ ಪರಿಷ್ಕರಣೆಗೆ ಒಂದು ವರ್ಗ ವಿರೋಧ ವ್ಯಕ್ತಪಡಿಸಿದರೆ, ಮತ್ತೊಂದು ವರ್ಗ ಪಠ್ಯದಲ್ಲಿ ಮೂಲಬದಲಾವಣೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದೆ. ವಾಸ್ತವಾಂಶ ಅರಿತು ನಾಳೆಯೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಪಠ್ಯದಿಂದ ಬರಹಗಳನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಸಾಹಿತಿಗಳ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಲವ್‌ ಜಿಹಾದ್‌ ತಡೆಗೆ ಕಾನೂನುಗಳಿದ್ದು, ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಬೆಳಗಾವಿ ಸುವರ್ಣ ಸೌಧದ ಎದುರು ಶಾವಿಗೆ ಒಣಹಾಕಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿರುವುದು ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.